

ಬಾಗಲಕೋಟೆ: ಸಂಶೋಧನೆ ಎಂದರೆ ಕೇವಲ ಪದವಿ ಪಡೆಯುವುದು, ಪ್ರಬಂಧ ಪ್ರಕಟಿಸುವುದು ಅಥವಾ ಪ್ರಶಸ್ತಿಗಳನ್ನು ಗಳಿಸುವುದಕ್ಕೆ ಸೀಮಿತವಾಗಬಾರದು. ಸಮಾಜದಲ್ಲಿನ ನೈಜ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಹೊಸ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಒಡಿಶಾದ ಭುವನೇಶ್ವರದ ಕಿಐಐಟಿ-ಟಿಬಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೃತ್ಯುಂಜಯ ಎಸ್. ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಂಗಣದಲ್ಲಿ ಶುಕ್ರವಾರ ಬಿವಿವಿಎಸ್ ಸಂಶೋಧನಾ ಶ್ರೇಷ್ಠತಾ ಕೇಂದ್ರ ಹಾಗೂ ಹಾನಗಲ್ಲ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಸುಧಾರಿತ ಕೋಶ ಮತ್ತು ಆಣ್ವಿಕ ತಂತ್ರಜ್ಞಾನ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪ್ರಾಯೋಗಿಕ ಕಾರ್ಯಾಗಾರ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಶೋಧನೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಔಷಧ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಸೇರಿ ವಿವಿಧ ಕ್ಷೇತ್ರಗಳ ತಜ್ಞರು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಪರಸ್ಪರ ಸಹಕಾರದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ನವೋದ್ಯಮ, ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಬಾಗಲಕೋಟೆಯಲ್ಲಿಯೂ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಂಶೋಧನಾ ಪರಿಸರ ವ್ಯವಸ್ಥೆ ನಿರ್ಮಿಸಿ, ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಹೊಸ ಪ್ರಯೋಗಗಳಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಸಂಶೋಧಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳಬೇಕು. ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಹೊಸ ಸಾಧನೆ ಮಾಡುವ ಗುರಿ ಹೊಂದಬೇಕು. ಇಂತಹ ರಾಷ್ಟ್ರೀಯ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿಜ್ಞಾನಿಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತಮ ವೇದಿಕೆಯಾಗಿದ್ದು, ಪ್ರಾಯೋಗಿಕ ಕಾರ್ಯಾಗಾರಗಳು ತಾಂತ್ರಿಕ ಕೌಶಲ್ಯ ವದ್ಧಿಗೆ ಸಹಕಾರಿಯಾಗಲಿವೆ ಎಂದರು.
ಎಸ್.ಎನ್. ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಸಜ್ಜನ, ಹಾನಗಲ್ಲ ಕುಮಾರೇಶ್ವರ ಔಷಧ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ವೈ. ಶ್ರೀನಿವಾಸ, ಡಾ. ಪವನ್ ಕುಮಾರ್ ಸಿಂಗ್, ಡಾ. ಚಂದ್ರಶೇಖರ ವಿ.ಎಂ., ಡಾ. ಎಸ್.ಆರ್. ದೇಶಪಾಂಡೆ, ಡಾ. ಅನಿತಾ ದೇಸಾಯಿ, ಡಾ. ಜಯದೇವ ಹಿರೇಮಠ, ಡಾ. ಮಲ್ಲಿಕಾರ್ಜುನ ಗೋಣಿ, ಡಾ. ಅವಿನಾಶ ಗುಡ್ಡನ್ನವರ ಇತರರಿದ್ದರು.
ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬಿವಿವಿಎಸ್ ಸಂಶೋಧನಾ ಶ್ರೇಷ್ಠತಾ ಕೇಂದ್ರ ಮತ್ತು ಒಡಿಶಾದ ಭುವನೇಶ್ವರದ ಕಿಐಐಟಿ-ಟಿಬಿಐ ನಡುವೆ ಪರಸ್ಪರ ಸಹಕಾರದ ಒಪ್ಪಂದ (ಎಂಒಯು) ಮಾಡಿಕೊಳ್ಳಲಾಯಿತು.
ಈ ಒಪ್ಪಂದದಿಂದ ಎರಡೂ ಸಂಸ್ಥೆಗಳ ನಡುವೆ ಸಂಶೋಧನಾ ಸಹಯೋಗ, ತಾಂತ್ರಿಕ ಜ್ಞಾನ ವಿನಿಮಯ, ನವೀನ ಆವಿಷ್ಕಾರಗಳು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ತರಬೇತಿ ಮತ್ತು ಮಾರ್ಗದರ್ಶನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ.