ಮಹಾಲಿಂಗೇಶ್ವರ ಮರು ರಥೋತ್ಸವ ಅದ್ದೂರಿ

ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಚಾಲನೆ * ಭಕ್ತಿ-ಸಂಭ್ರಮದ ಹೊನಲು ಕರಡಿ ಮಜಲು, ಮಂಗಳವಾದ್ಯ, ಕಲಾ ತಂಡಗಳ ಮೆರುಗು
ಮಹಾಲಿಂಗಪುರ : ಪಟ್ಟಣದ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದ ಮರು ರಥೋತ್ಸವಕ್ಕೆ  ಭಾನುವಾರ ಸಂಜೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿಯೊಂದಿಗೆ  ಚಾಲನೆ ನೀಡಿದರು.

 ಶನಿವಾರ ಸಂಜೆ 7 ಗಂಟೆಗೆ ಅದ್ದೂರಿಯಾಗಿ ಆರಂಭಗೊಂಡ ತುಂಬಿದ ತೇರಿನ ರಥೋತ್ಸವ, ಸಾವಿರಾರು ಭಕ್ತರ ಜಯ ಘೋಷದ ನಡುವೆ ಸಾಗಿ ಬಂದು ಭಾನುವಾರ ಬೆಳಗ್ಗೆ ಚನ್ನಗಿರೇಶ್ವರ ದೇವಸ್ಥಾನ ತಲುಪಿತು. ವಾಡಿಕೆಯಂತೆ ಭಾನುವಾರ ಸಂಜೆ ಮರು ತೇರಿನ ಉತ್ಸವಕ್ಕೆ ಚಾಲನೆ ನೀಡಲಾಯಿತು, ಮರು ರಥೋತ್ಸವಕ್ಕೂ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ದೂರದ ಊರುಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

 ಕಲಾ ತಂಡಗಳ ಮೆರುಗು
 ಮರು ತೇರಿನ ಮುಂಭಾಗದಲ್ಲಿ ಕರಡಿ ಮಜಲು ಸೇರಿ ವಿವಿಧ ಮಂಗಳ ವಾದ್ಯಗಳ ನಿನಾದ ಮೊಳಗುತ್ತಿದ್ದರೆ, ಬಂಡಿ ಉಚ್ಚಾಯಿ, ಕನ್ನಡಿ ಬಾಸಿಂಗ, ನಂದಿಕೋಲು ಹಾಗೂ ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ವಾದ್ಯಗಳ ಸದ್ದು, ಭಕ್ತರ ಜಯ ಘೋಷ ಹಾಗೂ ದೇವರ ನಾಮಸ್ಮರಣೆಯಿಂದ ಪಟ್ಟಣದ ವಾತಾವರಣವೇ ಭಕ್ತಿಮಯವಾಗಿತ್ತು.

 ಭಕ್ತರು ಬೆಂಡು, ಬೆತ್ತಾಸ, ಉತ್ತತ್ತಿಗಳನ್ನು ಹಾರಿಸಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮರು ತೇರು ರಾತ್ರಿ ವೇಳೆಯಲ್ಲಿ ಕಣ್ಮನ ಸೆಳೆಯುವಂತಿತ್ತು. ತೇರನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ತೇರಿನ ದರ್ಶನ ಪಡೆದ ಭಕ್ತರು ದೇವರಿಗೆ ಕಾಯಿ, ಕರ್ಪೂರ ಸೇರಿ ವಿವಿಧ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಹರಕೆ ತೀರಿಸಿದರು.

ಜಾತ್ರೆಯುದ್ದಕ್ಕೂ ಸಂಗೀತ ಸುಧೆ
 ಮರು ರಥೋತ್ಸವದ ಹಿನ್ನೆಲೆ ಮಹಾಲಿಂಗಪುರ ಪಟ್ಟಣದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆಯೇ ನಡೆಯಿತು. ಬಯಲಾಟ, ಡೊಳ್ಳಿನ ಹಾಡು, ಪಾರಿಜಾತ, ಭಜನೆ, ರಸಮಂಜರಿ, ಚೌಡಕಿ ಪದ, ಗಿಗಿ ಪದ ಹಾಗೂ ಶಾವರಿಕೆ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳು ಜಾತ್ರೆಯ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದವು. ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಪ್ರಾಯೋಜಿತ ಕಲಾ ತಂಡಗಳು, ಸ್ಥಳೀಯ ಕರಡಿ ಮಜಲು ತಂಡ, ಸೋಮನಕೊಪ್ಪದ ವಾಣಿಶ್ರೀ ಗೌಡರ ತಂಡದ ಮಹಿಳಾ ಡೊಳ್ಳು ಕುಣಿತ, ಕಂಕನವಾಡಿಯ ಪರಸಪ್ಪ ಕಿಸ್ತಿ ಹಾಗೂ ಬಸಪ್ಪ ಮಂಟೂರ ತಂಡದ ಗೊಂಬೆ ಕುಣಿತ, ಜಾನಮಟ್ಟಿ ವಿಠ್ಠಲ ತಳವಾರ ತಂಡದ ಡೊಳ್ಳು ಕುಣಿತ, ಹಂದಿಗುಂದ ಗ್ರಾಮದ ಭೀಮಶಿ ಚೌಗುಲಾ ತಂಡದ ಝಾಂಜ್ ಪಥಕ್ ನಾದಗಳು ಜಾತ್ರೆಗೆ ಮೆರಗು ನೀಡಿದವು.

 ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಜಾತ್ರಾ ಕಮೀಟಿ ನಿರಂತರ ಅಚ್ಚುಕಟ್ಟಾಗಿ ಪ್ರಸಾದ ವ್ಯವಸ್ಥೆ ಮಾಡಿತ್ತು. ಪ್ರಸಾದ ಸೇವಿಸಿದ ಭಕ್ತರು ಜಾತ್ರೆಯ ಸೊಬಗು ಸವಿದರು.

ಭದ್ರತೆಗೆ ಪೊಲೀಸ್ ಸರ್ಪಗಾವಲು
 ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಪಟ್ಟಣದ ಪ್ರಮುಖ ವೃತ್ತಗಳು, ತೇರಿನ ಸಂಚಾರ ಮಾರ್ಗಗಳು ಹಾಗೂ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ಮರು ರಥೋತ್ಸವ ಭಕ್ತರ ಜಯ ಘೋಷಗಳ ನಡುವೆ ಅದ್ದೂರಿಯಾಗಿ ಜರುಗಿತು.
Published on: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net