

ಇಳಕಲ್ಲ: ರಾಜ್ಯ ಸರ್ಕಾರದ 2026-27ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಕಾಳು ಖರೀದಿ ಕೇಂದ್ರಕ್ಕೆ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಪಿಕೆಪಿಎಸ್ ಸಂಘದ ಅಧ್ಯಕ್ಷ ಮಹಾಂತೇಶ ಹೊಳಿ ಹಾಗೂ ಕೆಎಂಎಫ್ ವ್ಯವಸ್ಥಾಪಕ ಗೋವಿಂದ ಹೂಲಗೇರಿ ಅವರು ಜಂಟಿಯಾಗಿ ಖರೀದಿ ಕೇಂದ್ರ ಉದ್ಘಾಟಿಸಿದರು.
ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಹೊಳಿ ಮಾತನಾಡಿ, ಸರ್ಕಾರವು ಸೂರ್ಯಕಾಂತಿಗೆ ಪ್ರತಿ ಕ್ವಿಂಟಲ್ಗೆ 8,343 ಬೆಂಬಲ ಬೆಲೆ ನಿಗದಿಪಡಿಸಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ನಂತೆ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ವರೆಗೆ ಸೂರ್ಯಕಾಂತಿ ಕಾಳು ಖರೀದಿಸಲಾಗುವುದು. ರೈತರು ಮಧ್ಯವರ್ತಿಗಳ ಮೊರೆ ಹೋಗದೆ ಈ ಕೇಂದ್ರದ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಬೇಕು ಎಂದು ತಿಳಿಸಿದರು.
ಕೆಎಂಎ್ ವ್ಯವಸ್ಥಾಪಕ ಗೋವಿಂದ ಹೂಲಗೇರಿ ಮಾತನಾಡಿ, ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಈ ಕೇಂದ್ರ ಆರಂಭಿಸಲಾಗಿದೆ. ತಾಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷೆ ಮಲ್ಲವ್ವ ಹನಮನಾಳ, ನಿರ್ದೇಶಕರಾದ ರಾಯನಗೌಡ ಪಾಟೀಲ, ಗುರು ಗಾಣಿಗೇರ, ಗುದ್ದೇಪ್ಪ ಪಲ್ಲೇದ, ಪರಶುರಾಮ ಕತ್ತಿ, ರವಿ ಚಿತ್ತರಗಿ, ಗೌಡಪ್ಪ ಕರಡಿ, ಬಸವರಾಜ ಬಾದವಾಡಗಿ, ವಿನೋದ ಬಾರಿಗಿಡದ, ಮುಖ್ಯ ಕಾರ್ಯನಿರ್ವಾಹಕ ವಿ.ಎಚ್.ಹೂಗಾರ ಇದ್ದರು.