

ಗುಳೆದಗುಡ್ಡ: ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಶಾಲಾ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನಿಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಅ. 9ರಂದು ಪ್ರಶಸ್ತಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ರಾಷ್ಟ್ರದ ಬಗ್ಗೆ ಚಿಂತನೆ ಮಾಡುವ ಮನೋಭಾವ ಬೆಳೆಸಲು ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ. ನಮ್ಮ ದೇಶದ ಪ್ರಧಾನಿಗಳು ದೇಶಕ್ಕೆ ನೀಡಿದ ಸೇವೆ, ಅವರ ಕೊಡುಗೆಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಜಾಗತಿಕವಾಗಿ ಭಾರತದ ಗೌರವ ಹೆಚ್ಚಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಎಂಬ ವಿಷಯಗಳ ಕುರಿತಾಗಿ ನಿಬಂಧ ಸ್ಪರ್ಧೆ ಹಾಗೂ ಪ್ರಾಥಮಿಕ ಶಾಲೆ ಮಕ್ಕಳಿಗೆ ನನ್ನ ನೆಚ್ಚಿನ ಮಹಾಪುರುಷರು, ಪ್ರೌಢ ಶಾಲಾ ಮಕ್ಕಳಿಗೆ ಮೋದಿಯವರ ಚಿತ್ರ ತೆಗೆಯುವ ಸ್ಪರ್ಧೆ ನಡಸಲಾಗಿದ್ದು, ಅಂದಾಜು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸುವುದರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ನೀಡಲಾವುದು ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಸೇರಿ ವಿವಿಧ ನಾಯಕರು ಆಗಮಿಸಲಿದ್ದಾರೆ. ಬಿಜೆಪಿ ನಗರ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು.
ಮುಖಂಡರಾದ ಸಂಪತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ದೀಪಕ ನೇಮದಿ, ಶಿವಾನಂದ ಯಣ್ಣಿ, ಶ್ರೀಕಾಂತ ಭಾವಿ, ಶಿವು ಬಾದವಾಡಗಿ ಇದ್ದರು.