

ಚಿಮ್ಮಡ: ಗ್ರಾಮ ವ್ಯಾಪ್ತಿಯಲ್ಲಿ ನೋಂದಾಯಿತ ಕೃಷಿ ಜಮೀನುಗಳನ್ನು ಭೂ ಪರಿವರ್ತಿಸಿ ಗ್ರಾಮಸ್ಥರ ಗಮನಕ್ಕೆ ತರದೇ ತಮ್ಮ ವ್ಯಾಪ್ತಿಗೆ ಸೇರ್ಪಡೆಗೊಳಿಸಿಗೊಂಡ ಮಹಾಲಿಂಗಪುರ ಪುರಸಭೆಯ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಕಾನೂನು ಹೋರಾಟದೊಂದಿಗೆ ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಸ್ಥಳಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಗ್ರಾಮದ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಿಮ್ಮಡ ಗ್ರಾಮದ ಸರ್ವೆ ನಂ. 102 ರಿಂದ 122 ಸರ್ವೆ ನಂಬರ್ ನಡುವಿನ ಒಟ್ಟು 12 ಸರ್ವೇ ನಂಬರ್ಗಳ ಅಂದಾಜು ನೂರಾರು ಎಕರೆ ಭೂ ಪ್ರದೇಶ ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ ಗ್ರಾಮದ ವ್ಯಾಪ್ತಿಯಲ್ಲಿಯೇ ಭೂಪರಿವರ್ತಿಸಿದ ಹಲವು ನಿವೇಶನಗಳನ್ನು ಅಕ್ರಮವಾಗಿ ಮಹಾಲಿಗಪುರ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಕಿಡಿಕಾರಿದರು.
ಇದರಿಂದ ಗ್ರಾಮ ಪಂಚಾಯಿತಿಯ ಆದಾಯ ಕುಸಿತವಾಗುವುದಲ್ಲದೇ ಗ್ರಾಮದ ವ್ಯಾಪ್ತಿಯೂ ಕಿರಿದಾಗುತ್ತದೆ. ಗ್ರಾಮ ವ್ಯಾಪ್ತಿಯ ಜಮೀನು ಗ್ರಾಮಕ್ಕೆ ಸೇರ್ಪಡೆಗೊಳಿಸುವಂತೆ ಈ ಹಿಂದೆ ಬಾಗಲಕೋಟೆ ಜಿಲ್ಲಾಧಿಕಾರಿ, ಜಮಖಂಡಿ ಉಪ ವಿಭಾಗಾಧಿಕಾರಿ, ರಬಕವಿ-ಬನಹಟ್ಟಿ ತಹಸೀಲ್ದಾರ, ತಾಲೂಕು ಪಂಚಾಯಿತಿ, ಮಹಾಲಿಂಗಪುರ ಪುರಸಭೆಗೆ ಲಿಖಿತ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಾನೂನು ಸಮರದೊಂದಿಗೆ, ಉಗ್ರ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖಂಡರು ತಿಳಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಭು ನೇಸೂರ, ಬಸವರಾಜ ಕುಂಚನೂರ, ಪರಪ್ಪ ಮುಂದಿನಮನಿ, ಆನಂದ ಕವಟಿ, ರಾಜು ಬಗನಾಳ, ಪ್ರಭು ಮುಧೋಳ, ಪ್ರಕಾಶ ಪಾಟೀಲ, ವಿಜಯಕುಮಾರ ಪೂಜಾರಿ, ಮಹಾಲಿಂಗ ಮಾಯಣ್ಣವರ, ಮಹಾಂತೇಶ ಜಾಲಿಕಟ್ಟಿ, ಅಶೋಕ ಮೋಟಗಿ, ಬಾಳಪ್ಪ ಗಡೆಪ್ಪನವರ ಇದ್ದರು.