

ಮುಧೋಳ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸದಢತೆಯ ಜತೆಗೆ ಶಿಸ್ತು, ಸಹಬಾಳ್ವೆ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತವೆ. ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಸವಾರ್ಂಗೀಣ ವಿಕಾಸ ಸಾಧ್ಯ ಎಂದು ನಿಕಟಪೂರ್ವ ಕಸಾಪ ಅಧ್ಯಕ್ಷ ಬಿ.ಆರ್.ಪಿ. ಸಂಗಮೇಶ ನೀಲಗುಂದ ಹೇಳಿದರು.
ನಗರದ ಕೆ.ಆರ್. ಲಕ್ಕಂ ಸಿಬಿಎಸ್ಇ ಶಾಲೆಯ ಆಟದ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶ್ರೀ ಕಲ್ಮೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆ.ಆರ್. ಲಕ್ಕಂಸಿಬಿಎಸ್ಇ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಸಿಬಿಎಸ್ಇ ಶಾಲೆಗಳ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಪ್ರತಿಭೆಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕಲ್ಮೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಪ್ಪಾಸಾಹೇಬ ಲಕ್ಕಂ ಮಾತನಾಡಿ, ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ನಿರಂತರವಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬಂದಿದೆ. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಣ ಪ್ರೇಮಿ ಈರಣಗೌಡ ಪಾಟೀಲ್, ಸಂಸ್ಥೆಯ ಧರ್ಮದರ್ಶಿ ಸುನಂದಾ ಲಕ್ಕಂ ಇದ್ದರು. ಆಡಳಿತಾಧಿಕಾರಿ ಆನಂದ ಲಕ್ಕಂ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿ ಶುಭ ಕೋರಿದರು. ಶಾಲೆಯ ಪ್ರಾಚಾರ್ಯ ಡಾ. ಸರ್ಪರಾಜ್ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಕೂಟದ ಉದ್ದೇಶ ಹಾಗೂ ನಿಯಮಗಳ ಕುರಿತು ವಿವರಿಸಿದರು.
ವಿದ್ಯಾರ್ಥಿನಿ ಸಿದ್ಧಿ ಪಟೇಲ್ ಸ್ವಾಗತಿಸಿದರು. ಮೇಘನಾ ನಾಗನೂರ ಹಾಗೂ ಸಾನ್ವಿ ಶಹಾಪುರಕರ ನಿರೂಪಿಸಿ, ವಂದಿಸಿದರು.
ಅಂತರ್ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ವಿವಿಧ ಸಿಬಿಎಸ್ಇ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ತಲಾ 16 ಕಬಡ್ಡಿ ತಂಡಗಳು ಹಾಗೂ 16 ವಾಲಿಬಾಲ್ ತಂಡಗಳು ಸೇರಿ ಒಟ್ಟು 32 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.