ಜಮಖಂಡಿ: ಬಸವಣ್ಣನವರು ಸಾರಿದ ದಯೆಯೇ ಧರ್ಮ ಎಂಬ ಸಂದೇಶ ಹಾಗೂ ರೇಣುಕಾಚಾರ್ಯರ ಮಾನವ ಧರ್ಮದ ಆಶಯಗಳು ಒಂದೇ ಆಗಿವೆ. ಹೀಗಿರುವಾಗ ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ರಾಜಕೀಯದಲ್ಲಿ ಬೆಳೆಯಲು ಯಾರ ಅಭ್ಯಂತರವೂ ಇಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ರೈತರಿಗೆ ನೀರು, ವಿದ್ಯುತ್ ಒದಗಿಸುವುದರ ಜೊತೆಗೆ ಅವರ ಬೆಳೆಗಳಿಗೆ ಯೋಗ್ಯ ಬೆಲೆ ನೀಡುವುದು ಅಗತ್ಯ. ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಬದಲಾಗಿ ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ರೈತರ ಶ್ರಮಕ್ಕೆ ತಕ್ಕ ಪ್ರತಿಲ ದೊರೆಯುವಂತಹ ವ್ಯವಸ್ಥೆ ರೂಪಿಸಬೇಕು ಎಂದರು.
ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಕಷಿ ಕ್ಷೇತ್ರದಿಂದ ರಾಜ್ಯಕ್ಕೆ ಹೆಚ್ಚಿನ ಆದಾಯ ನೀಡುವ ಜಿಲ್ಲೆಗಳಾಗಿವೆ. ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ರೈತರ ಹಿತಾಸಕ್ತಿಯೊಂದಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರೈತರಿಗೆ ಸಂತೋಷವಾಗುವಂತಹ ಪರಿಹಾರ ಶೀಘ್ರ ದೊರೆಯುವ ವಿಶ್ವಾಸವಿದೆ ಎಂದರು.
ರೈತರ ಬೆವರು ಕೃಷ್ಣೆಯ ನೀರಿನೊಂದಿಗೆ ಭೂಮಿಯನ್ನು ಸೇರಿದಾಗ ಬಂಗಾರದ ಬೆಳೆ ಬರುತ್ತದೆ. ಹೀಗಾಗಿ ರೈತರ ಶ್ರಮಕ್ಕೆ ತಕ್ಕ ಮೌಲ್ಯ ದೊರೆಯುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ರೈತರು ಮಳೆ ಬಂದರೂ ಸಮಸ್ಯೆ, ಮಳೆ ಬಾರದಿದ್ದರೂ ಸಂಕಷ್ಟ ಎದುರಿಸುತ್ತಾರೆ. ಬೆಳೆ ಹೆಚ್ಚಾಗಿ ಬೆಳೆದರೂ ಬೆಲೆ ಕುಸಿತದ ಆತಂಕ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟ ನಿವಾರಣೆಗೆ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಚಿಂತನೆ ನಡೆಸಬೇಕು. ಸಮಸ್ಯೆಯ ಭಾಗವಾಗಿ ಉಳಿಯದೆ, ಪರಿಹಾರದ ಭಾಗವಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ರೈತಪರ ಕಾಳಜಿಯನ್ನು ಸ್ಮರಿಸಿದ ಬೊಮ್ಮಾಯಿ, ಚಿಕ್ಕಪಡಸಲಗಿ ಬ್ಯಾರೇಜ್ ತುಂಬುವ ಕಾರ್ಯ ಸವಾಲಿನದ್ದಾಗಿತ್ತು. ಇಂಜಿನಿಯರ್ಗಳು ಅಸಾಧ್ಯವೆಂದರೂ ರೈತರ ಹಿತದಷ್ಟಿಯಿಂದ ಯೋಜನೆಗೆ ಒಪ್ಪಿಗೆ ನೀಡಿ, ಪಂಪ್ಗಳ ವ್ಯವಸ್ಥೆ ಕಲ್ಪಿಸಿ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದೆವು ಎಂದು ನೆನಪಿಸಿಕೊಂಡರು.
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಧರ್ಮವೇ ನಮ್ಮ ಬದುಕಿನ ದಾರಿ, ಕಾಯಕದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವದೇ ಧರ್ಮ, ಮಕ್ಕಳಿಗೆ ತಾಯಿ ಒಳ್ಳೆಯ ಸಂಸ್ಕಾರವನ್ನು ನೀಡಬೇಕು, ಮನೆಯ ಕಷ್ಟಗಳನ್ನು ಪಕ್ಕಕ್ಕೆ ಇಟ್ಟು ಮಕ್ಕಳಿಗೆ ಶಿಕ್ಷಣ ನೀಡಬೇಕು, ದೇಶಕ್ಕೆ ಸಾಧಕರ ಪಟ್ಟಿ ನೋಡಿದರೆ ಅದು ಹಳ್ಳಿಯಿಂದ ಬಂದಿರುತ್ತದೆ, ವೀರಶೈವ ಲಿಂಗಾಯತ ಸಮಾಜ ಒಟ್ಟುಗುಡಿಸಬೇಕು ರಾಜಕಾರಣಕ್ಕೆ ಒಡೆಯುವ ಕೆಲಸ ಮಾಡಬಾರದು, ಶ್ರೇಷ್ಠವಾದ ಧರ್ಮ ವೀರಶೈವ ಲಿಂಗಾಯತ ಸಮಾಜ, ವಿಶ್ವವನ್ನು ಆಳುವ ಶಕ್ತಿ ಇದೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ನಮ್ಮನ್ನು ಬೇರೆಯವರು ಆಳುತ್ತಿದ್ದಾರೆ ಮುಂದಿನ ದಿನಗಳಲ್ಲಿ ಒಗ್ಗಟ್ಟಿಗಾಗಿ ಶ್ರಮಿಸುವ ಅವಶ್ಯಕತೆ ಇದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಕಳವು, ಹಿಂಸೆ, ಸುಳ್ಳು, ಕೋಪ ಮತ್ತು ದ್ವೇಷಗಳಿಂದ ದೂರವಿದ್ದು, ಅಂತರಂಗ ಹಾಗೂ ಬಹಿರಂಗ ಶುದ್ಧತೆಯಿಂದ ಬದುಕುವ ಸಂದೇಶವನ್ನು ಸಾರಿದ್ದಾರೆ, ಈ ನಾಡು ಅನೇಕ ಸಂತರು, ಶರಣರು ಹಾಗೂ ಸೂಫಿ ಸಂತರಿಗೆ ಜನ್ಮ ನೀಡಿದೆ. ವಿಶ್ವಗುರು ಬಸವಣ್ಣನವರು ಶ್ರೇಷ್ಠ ವಚನಕಾರರಾಗಿದ್ದು, ಅವರ ವಿಚಾರಧಾರೆಗಳನ್ನು ಸ್ಮರಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ವೇದಿಕೆಯಲ್ಲಿ ಶಾಸಕ ಜಗದೀಶ ಗುಡಗುಂಟಿ, ರೈತ ಮುಖಂಡ ಬಿ.ಎಸ್.ಸಿಂಧೂರ ಇತರರಿದ್ದರು.
ಸಕ್ಕರೆ ಕಾರ್ಖಾನೆಗಳು ರೈತರ ಬದುಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ. ಹೀಗಾಗಿ ಕಬ್ಬು ಬೆಳೆಗಾರರ ಹಿತದಷ್ಟಿಯಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರೈತರಿಗೆ ಸೂಕ್ತ ದರ ದೊರೆಯುವಂತೆ ಕಾರ್ಖಾನೆಗಳ ಮಾಲೀಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಸಂಸದ.