

ಬೀಳಗಿ: ಹಿಂದೂ ಸಮಾಜದ ಒಗ್ಗಟ್ಟು, ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ-ಬೃಹತ್ ಶೋಭಾಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೂ ಸಮಾಜವು ಯಾರಿಗೂ ತೊಂದರೆ ನೀಡದೆ ಶಾಂತಿ ಮತ್ತು ಸಾತ್ವಿಕತೆಯಿಂದ ಬದುಕುವ ಪರಂಪರೆ ಹೊಂದಿದೆ. ಅದೇ ಸಂದರ್ಭದಲ್ಲಿ ಸಮಾಜಕ್ಕೆ ಅನ್ಯಾಯ ಅಥವಾ ತೊಂದರೆ ಎದುರಾದಾಗ ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಒಗ್ಗಟ್ಟಿನಿಂದ ಎದುರಿಸುವ ಸಾಮರ್ಥ್ಯವೂ ಸಮಾಜಕ್ಕಿದೆ ಎಂದರು.
ಬೀಳಗಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ಗಣಪತಿ ಬಪ್ಪನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಈ ಸಮಾವೇಶವು ದೊಡ್ಡ ನಗರ ಅಥವಾ ಜಿಲ್ಲಾ ಕೇಂದ್ರದ ಕಾರ್ಯಕ್ರಮ ನೆನಪಿಸುವಂತಿದೆ. ಸಂಘಟಕರು ಹಾಗೂ ಹಿಂದೂ ಸಮಾಜದ ಬಂಧುಗಳ ಶ್ರಮದಿಂದ ಇಂತಹ ಬೃಹತ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶ್ಲಾಸಿದರು.
ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಮಾತನಾಡಿ, ಹಿಂದುತ್ವ ಎಂದರೆ ಎಲ್ಲ ಜಾತಿ, ಸಮುದಾಯದವರನ್ನು ಒಗ್ಗೂಡಿಸಿಕೊಂಡು ಸಾಗುವ ಏಕತೆಯ ಸಂಕೇತ. ಕೇಸರಿ ಬಣ್ಣವು ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಅದು ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ ಎಂದು ತಿಳಿಸಿದರು.
ಹಿಂದೂ ಮಹಾ ಗಣಪತಿಯ ಕೋಶಾಧ್ಯಕ್ಷ ವೀರಣ್ಣ ತೋಟದ ಮಾತನಾಡಿದರು. ಬೀಳಗಿ ಹುಚ್ಚೇಶ್ವರ ಮಠದ ಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿ.ಪ ಸದಸ್ಯ ಹನಮಂತ ನಿರಾಣಿ ಇತರರಿದ್ದರು.