

ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ
ಬಾಗಲಕೋಟೆ: ವಿಜಯಪುರ, ಯಾದಗಿರಿ, ರಾಯಚೂರು ಸೇರಿ ರೈತರು ಕೃಷಿಗಾಗಿ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಆಲಮಟ್ಟಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ಗಮನಿಸಿದರೆ ರೈತರಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರಲ್ಲಿ ಉಂಟಾಗುವ ಸಂಕಷ್ಟಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹಾಗೂ ಲಭ್ಯತೆಯನ್ನು ಅಧಿಕಾರಿಗಳ ತಂಡದೊಂದಿಗೆ ಶನಿವಾರ ಸಂಜೆ ಪರಿಶೀಲಿಸಿ ಮಾತನಾಡಿದ ಅವರು, ಸದ್ಯದ ನೀರಿನ ಸಂಗ್ರಹವನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲು ಸಾಧ್ಯವಿದ್ದು, ರೈತರ ಕಷಿ ಚಟುವಟಿಕೆಗಳಿಗೆ ನೀರು ಹರಿಸುವ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆಲಮಟ್ಟಿ ಜಲಾಶಯದಿಂದ ಹುನಗುಂದ, ಇಳಕಲ್ಲ ಹಾಗೂ ಕುಷ್ಟಗಿ ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಜಾಕ್ವೆಲ್ ಮತ್ತು ಪಂಪ್ಹೌಸ್ನಲ್ಲಿ ಎರಡು ಮೋಟಾರ್ಗಳು ಅಚಾನಕ್ಕಾಗಿ ಕೆಟ್ಟುಹೋದ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅಧಿಕಾರಿಗಳು ಒಂದು ಮೋಟಾರ್ ಈಗಾಗಲೇ ದುರಸ್ತಿ ಮಾಡಿದ್ದು, ಮತ್ತೊಂದು ಮೋಟಾರ್ನ್ನು ಕೂಡ ತಕ್ಷಣ ದುರಸ್ತಿ ಮಾಡಿ ಹಿಂದಿನಂತೆ ಯಥಾಸ್ಥಿತಿಯಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಸಂಗಪ್ಪ, ಬಾಗಲಕೋಟೆ ಹೆಸ್ಕಾಂ ಅಧೀಕ್ಷಕ ಅಭಿಯಂತರ ಯಂಕಂಚಿ ಇತರರು ಇದ್ದರು.