ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಸಮೀಪದ ಹೂವನೂರಿನಲ್ಲಿ ನಡೆಯುತ್ತಿರುವ ನಾಲ್ಕನೇ ಸ್ವಾಭಿಮಾನಿ ಶರಣಮೇಳದ ಸಮಾರೋಪ ಸಮಾರಂಭದಲ್ಲಿ ಕ್ಯಾಲೆಂಡರ್ ಗಣ್ಯರು ಬಿಡುಗಡೆಗೊಳಿಸಿದರು. ಜಗದ್ಗುರು ಡಾ. ಚನ್ನಬಸವಾನಂದ, ಬೀದರನ ಮಾತೆ ಸತ್ಯಾದೇವಿ, ಅಬ್ದುಲ್ ರಜಾಕ್ ಖಾದ್ರಿ ಇದ್ದರು.
ಹುನಗುಂದ: ದುರ್ಗುಣ, ದುರ್ಭಾವ, ದುರ್ವಿಚಾರ ಅಳಿದರೆ ಮಾತ್ರ ಧರ್ಮ ಪ್ರಚಾರ ಸಾಧ್ಯ ಎಂದು ಧಾರವಾಡ ಸತ್ತೂರಿನ ಪೂಜ್ಯ ಅಬ್ದುಲ್ ರಜಾಕ್ ಖಾದ್ರಿ ಹೇಳಿದರು.
ತಾಲೂಕಿನ ಕೂಡಲಸಂಗಮ ಕ್ರಾಸ್ ಸಮೀಪದ ಹೂವನೂರಿನಲ್ಲಿ ಬುಧವಾರ ಹಮ್ಮಿಕೊಂಡಿರುವ ನಾಲ್ಕನೇ ಸ್ವಾಭಿಮಾನಿ ಶರಣಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹಲವಾರು ಯೋಜನೆ ಸಮಾಜಪರ, ಧರ್ಮಪರವಾಗಿ ಹಾಕಿಕೊಂಡಿದ್ದಾರೆ. ಅವರಿಗೆ ಸಹಕರಿಸುವುದು ಎಲ್ಲರ ಕರ್ತವ್ಯ ಎಂದುಕೊಂಡು ಭಾವಿಸಿ. ಧರ್ಮದ ಏಳಿಗೆಗೆ ತನು, ಮನ, ಧನ ಸೇವೆಗೈಯಬೇಕು ಎಂದರು.
ಜಗದ್ಗುರು ಡಾ. ಚನ್ನಬಸವಾನಂದ ಸಾನ್ನಿಧ್ಯ ವಹಿಸಿದ್ದರು. ಬೀದರ ಬಸವ ಮಂಟಪ ಮಾತೆ ಸತ್ಯಾದೇವಿ, ಬ್ಯಾಲಹಳ್ಳಿಯ ಪ್ರಭುಲಿಂಗ ಸ್ವಾಮೀಜಿ, ಹೂವನೂರನ ಲಿಂಗಾರೂಢ ಸ್ವಾಮೀಜಿ, ಬೀದರ ಅಶೋಕ ಮಾನೂರೆ, ಶಿವರಾಜ ಪಾಟೀಲ ಅತಿವಾಳ, ರವಿಕಾಂತ ಬಿರಾದಾರ, ಭೀಮರಾವ ಬಿರಾದಾರ ಹೈದ್ರಾಬಾದ, ಬಾಬುರಾವ ಟೆಂಗಸಾಲ ಇದ್ದರು.
4ನೇ ಸ್ವಾಭಿಮಾನಿ ಶರಣ ಮೇಳದಲ್ಲಿ ಕೈಗೊಂಡ ನಿರ್ಣಯ
ಪ್ರತಿ ವರ್ಷ ಸ್ವಾಭಿಮಾನಿ ಶರಣ ಮೇಳ ಹಾಗೂ ಕಲ್ಯಾಣ ಪರ್ವ ಆಯೋಜಿಸುವುದು. ವರ್ಷಕ್ಕೆ ಒಂದು ಸಾರಿ ಅಂತರ ರಾಷ್ಟ್ರೀಯ ಮಟ್ಟದ ಬಸವ ತತ್ವ ಸಮ್ಮೇಳನ ವಿದೇಶದಲ್ಲಿ ಆಯೋಜಿಸುವುದು
ಎರಡು ತಿಂಗಳ ಒಳಗೆ ಮಾತೆ ಗಂಗಾದೇವಿ ಧರ್ಮಗ್ರಂಥ ಬಿಡುಗಡೆಗೊಳಿಸಬೇಕು ಇಲ್ಲವೇ ಗಂಗಾದೇವಿ ಸೇರಿದಂತೆ ಬಸವ ಧರ್ಮ ಪೀಠದ ಪೂಜ್ಯರು ಪೀಠತ್ಯಾಗ ಮಾಡಬೇಕು.
ಲಿಂ. ಮಾತಾಜಿಯವರು ಬರೆದ ಮರಣ ಪತ್ರ ತಿರುಚಿದ್ದಕ್ಕೆ ಮಾತೆ ಗಂಗಾದೇವಿ ಭಕ್ತರ ಕ್ಷಮೆ ಯಾಚಿಸಬೇಕು.
ಕೇಂದ್ರ ಸರ್ಕಾರ ಕೂಡಲಸಂಗಮಕ್ಕೆ ನೇರ ರೈಲ್ವೆ ಸಂಪರ್ಕ ಕಲ್ಪಿಸಬೇಕು.
ಕೂಡಲಸಂಗಮ ಅಂತರ ರಾಷ್ಟ್ರೀಯ ಕೇಂದ್ರವಾಗಿ ಸರ್ಕಾರ ಅಭಿವೃದ್ಧಿ ಪಡಿಸಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಜಗದ್ಗುರು ಡಾ. ಚನ್ನಬಸವಾನಂದ ನಿರ್ಣಯ ಮಂಡಿಸಿದರು. ಭಕ್ತರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.