

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸಮಾಜಮುಖಿ ದೃಷ್ಟಿಕೋನ ಬೆಳೆಸುವ ಮೂಲಕ ಜ್ಞಾನವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ವಾತಾವರಣ ನಿರ್ಮಿಸಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಎಂ.ವೈ. ಕರಿದುರ್ಗನವರ ಹೇಳಿದರು.
ನಗರದ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಬಿ.ವಿ.ವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಸುಸ್ಥಿರ ಭವಿಷ್ಯಕ್ಕಾಗಿ ಅಂತರಶಿಸ್ತೀಯ ವಿಜ್ಞಾನಗಳಲ್ಲಿ ಇತ್ತೀಚಿನ ಪ್ರಗತಿ' ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸುಸ್ಥಿರ ಭವಿಷ್ಯ ನಿರ್ಮಾಣಕ್ಕೆ ವಿಜ್ಞಾನದ ವಿವಿಧ ವಿಭಾಗಗಳ ಜ್ಞಾನವನ್ನು ಸಮನ್ವಯಗೊಳಿಸುವುದು ಅತ್ಯಗತ್ಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳನ್ನು ಸಮಾಜದ ಒಳಿತಿಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಂತರಶಿಸ್ತೀಯ ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಎಂದರು.
ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಿ.ಎಸ್. ಸೂಳಿಭಾವಿ ಮಾತನಾಡಿ, ಉತ್ತಮ ಶಿಕ್ಷಕರಾಗಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಗುರು-ಶಿಷ್ಯ ಪರಂಪರೆಯ ಅರಿವು ಮುಖ್ಯ. ಮಾಸ್ಟರ್, ಸರ್ ಎನ್ನುವುದಕ್ಕಿಂತ ಗುರು ಎಂಬ ಪದಕ್ಕೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಹಾಗೂ ಸಮಯ ಪಾಲನೆ ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರಾಚಾರ್ಯೆ ಎಸ್.ಆರ್. ದೇಶಪಾಂಡೆ ಹಾಗೂ ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್.ಲಮಾಣಿ ಉಪಸ್ಥಿತರಿದ್ದರು.
ನಾಲ್ಕು ತಾಂತ್ರಿಕ ಗೋಷ್ಠಿಗಳು: ವಿಚಾರ ಸಂಕಿರಣದಲ್ಲಿ ನಾಲ್ಕು ತಾಂತ್ರಿಕ ಗೋಷ್ಠಿಗಳು ನಡೆದವು. ಮೊದಲ ಗೋಷ್ಠಿಯಲ್ಲಿ `ಪಾಲಿಮೆರಿಕ್ ಸೆಕೆಂಡ್ ಆರ್ಡರ್ ನಾನ್‌ಲಿನಿಯರ್ ಆಪ್ಟಿಕಲ್ ಮೆಟೀರಿಯಲ್ಸ್ಗಳ ಅಭಿವೃದ್ಧಿ ಕುರಿತು ಡಾ. ಎಂ.ವೈ. ಕರಿದುರ್ಗನವರ ಉಪನ್ಯಾಸ ನೀಡಿದರು.
ಎರಡನೇ ಗೋಷ್ಠಿಯಲ್ಲಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೊಟ್ರೇಶ್ ಎಂ.ಜಿ. ಅವರು `ಶುದ್ಧ ನೀರಿಗಾಗಿ ನ್ಯಾನೊ ವಿಜ್ಞಾನ: ಸುಸ್ಥಿರತೆಗಾಗಿ ಫೋಟೋಪ್ರೇರಿತ ವೇಗವರ್ಧನೆ' ವಿಷಯ ಮಂಡಿಸಿದರು.
ಮೂರನೇ ಗೋಷ್ಠಿಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೈಲಾಸ್ ಸೋನೆವಾಣೆ ಅವರು `ಪ್ರತಿಜೀವಿಕ ಪ್ರತಿರೋಧ: ಜಾಗತಿಕ ಆರೋಗ್ಯ ಸಮಸ್ಯೆ' ಕುರಿತು ಉಪನ್ಯಾಸ ನೀಡಿದರು.
ನಾಲ್ಕನೇ ಗೋಷ್ಠಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಬಿ. ನಡುವಿನಮನಿ ಅವರು `ಸುಸ್ಥಿರ ಇಂಜಿನಿಯರಿಂಗ್‌ನಲ್ಲಿ ಮೇಲ್ಮೈ ಒರುಟುತನ ಮತ್ತು ಬೇರಿಂಗ್ ಕಾರ್ಯಕ್ಷಮತೆ' ಕುರಿತು ವಿಷಯ ಮಂಡಿಸಿದರು.