ಜನತಾ ರಾಜ ಗಣೇಶನಿಗೆ ಅದ್ದೂರಿ ವಿದಾಯ

ಮುಧೋಳದ ಜನತಾ ಪ್ಲಾಟ್‌ನಲ್ಲಿ ಶನಿವಾರ ನಡೆದ ಜನತಾ ರಾಜ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು.
ಮುಧೋಳದ ಜನತಾ ಪ್ಲಾಟ್‌ನಲ್ಲಿ ಶನಿವಾರ ನಡೆದ ಜನತಾ ರಾಜ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು.
Published on: 

ಮುಧೋಳ: ನಗರದ ಜನತಾ ಪ್ಲಾಟ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪ್ರಸಿದ್ಧ ಜನತಾ ರಾಜ ಗಣೇಶನ ಮೂರ್ತಿಯನ್ನು ಹದಿಮೂರನೇ ದಿನವಾದ ಶನಿವಾರ ಸಂಜೆ ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಡೋಲ್-ತಾಷಾ ವಾದನ, ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಹಾಗೂ ಭಕ್ತರ ಜಯಘೋಷಗಳಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ವಿಶೇಷ ಪೂಜಾ ಕಾರ್ಯಕ್ರಮಗಳ ಬಳಿಕ ಆರಂಭವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಜಡಗಣ್ಣ ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿಬ ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆಯುದ್ದಕ್ಕೂ ನೂರಾರು ಭಕ್ತರು ಪಾಲ್ಗೊಂಡು ಗಣೇಶನ ದರ್ಶನ ಪಡೆದರು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧೆಡೆ ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದ ಮಹಾರಾಷ್ಟçದ ಸಾಂಗಲಿಯಿಂದ ಆಗಮಿಸಿದ್ದ ಡೋಲ್-ತಾಷಾ ತಂಡದ ವಾದನಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಛತ್ರಪತಿ ಶಿವಾಜಿ ಮಹಾರಾಜ, ಶ್ರೀರಾಮಚಂದ್ರ ಹಾಗೂ ಆಂಜನೇಯ ಸ್ವಾಮಿಯ ಸ್ತಬ್ಧಚಿತ್ರಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನವೂ ಗಮನ ಸೆಳೆಯಿತು. ಜನತಾ ರಾಜಾ ಗಣಪತಿ ಕೀ ಜೈ ಎಂಬ ಜಯಘೋಷಗಳು ಮೊಳಗಿದವು.

ಬಿಗಿ ಪೊಲೀಸ್ ಬಂದೋಬಸ್ತ್: ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಮುಧೋಳ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿ ಭದ್ರತೆ ಪರಿಶೀಲಿಸಿದರು. ಸಿಪಿಐ ಕಚೇರಿಯಿಂದ ಆರಂಭವಾದ ಪಥಸಂಚಲನ ಜನತಾ ಪ್ಲಾಟ್, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ ಹಾಗೂ ರನ್ನ ವೃತ್ತ ಸೇರಿ ವಿವಿಧ ಪ್ರದೇಶಗಳಲ್ಲಿ ನಡೆಯಿತು.

ಎಸ್‌ಪಿ ಸಿದ್ಧಾರ್ಥ ಗೋಯಲ್ ಹಾಗೂ ಡಿವೈಎಸ್ಪಿ ಸೈಯ್ಯದ್ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇಬ್ಬರು ಎಸ್‌ಪಿ, ನಾಲ್ವರು ಡಿಎಸ್‌ಪಿ, ೧೬ ಸಿಪಿಐ, ೨೮ ಪಿಎಸ್‌ಐ ಹಾಗೂ ೪೪ ಎಎಸ್‌ಐ ಸೇರಿ ೩೦೦ಕ್ಕೂ ಅಧಿಕ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು, ೫೦೦ ಹೋಮ್‌ಗಾರ್ಡ್ಗಳು, ಮೂರು ಐಆರ್‌ಬಿ ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಯಿತು. ಪೊಲೀಸರ ಮುನ್ನೆಚ್ಚರಿಕೆ ಕ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ತಡರಾತ್ರಿವರೆಗೂ ನಡೆದ ಶಾಂತಿಯುತವಾಗಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net