ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹ

ಗುಳೇದಗುಡ್ಡದ ಪುರಸಭೆ ಸಿಬ್ಬಂದಿ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಯಿತು. ರಂಗಪ್ಪ ಶೇಬಿನಕಟ್ಟಿ, ರವೀಂದ್ರ ಪಟ್ಟಣಶೆಟ್ಟಿ, ಅಶೋಕ ಹೆಗಡೆ, ಕಮಲಕಿಶೋರ ಮಾಲಮಾಣಿ, ವಸಂತಸಾ ಧೋಂಗಡೆ, ಮಧುಸೂಧನ ರಾಂದಡ, ಗಣೇಶ ಶೀಲವಂತ ಇತರರಿದ್ದರು.
ಗುಳೇದಗುಡ್ಡದ ಪುರಸಭೆ ಸಿಬ್ಬಂದಿ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಯಿತು. ರಂಗಪ್ಪ ಶೇಬಿನಕಟ್ಟಿ, ರವೀಂದ್ರ ಪಟ್ಟಣಶೆಟ್ಟಿ, ಅಶೋಕ ಹೆಗಡೆ, ಕಮಲಕಿಶೋರ ಮಾಲಮಾಣಿ, ವಸಂತಸಾ ಧೋಂಗಡೆ, ಮಧುಸೂಧನ ರಾಂದಡ, ಗಣೇಶ ಶೀಲವಂತ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಯಿಂದ ಸರದಿ ಸತ್ಯಾಗ್ರಹ ಆರಂಭ
  • ನಿಲ್ಲದ ಭ್ರಷ್ಟಾಚಾರ
  • ನ್ಯಾಯ ದೊರೆಯುವವರೆಗೂ ನಿರಂತರ ಹೋರಾಟ
ಗುಳೇದಗುಡ್ಡ : ಪಟ್ಟಣಕ್ಕೆ ಮೂಲ ಸೌಕರ್ಯ ಒದಗಿಸಬೇಕು, ಪುರಸಭೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪುರಸಭೆ ಎದುರಿಗೆ ಮಂಗಳವಾರದಿಂದ ಹೋರಾಟ ಆರಂಭಿಸಿದೆ.
ಬಿಜೆಪಿ ಕಾರ್ಯಕರ್ತರು ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಯ ಮೇಲೆ ಸರದಿ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಪುರಸಭೆ ಆಡಳಿತ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಪಟ್ಟಣದಲ್ಲಿ ರಸ್ತೆಗಳು ಹದಗೆಟ್ಟಿವೆ, ಕುಡಿಯುವ ನೀರು ರಸ್ತೆಯಲ್ಲಿ ಹಳ್ಳದಂತೆ ಹರಿಯುತ್ತವೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಅದರೆ ಪುರಸಭೆ ಅಧಿಕಾರಿಗಳು ಮಾತ್ರ ತಮ್ಮ ಕಾರ್ಯ ಮರೆತು ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ. ಸಾರ್ವಜನಿಕರಿಂದ ಹಣ ಕೀಳುತ್ತಿದ್ದಾರೆ ಎಂದು ಆರೋಪಿಸಿದರು.
ಇ-ಸ್ವತ್ತು, ಕಟ್ಟಡ ಪರವಾನಗಿ, ಜನನ-ಮರಣ ಪ್ರಮಾಣ ಪತ್ರ ಸೇರಿ ಪುರಸಭೆಯಲ್ಲಿ ಎಲ್ಲಾ ಕೆಲಸಗಳಿಗೂ ಲಂಚ ನೀಡುವುದು ಕಡ್ಡಾಯವಾಗಿದೆ. ಸಾರ್ವಜನಿಕರಿಂದ ದೂರು ಬಂದರೂ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಎಲ್ಲಾ ಭ್ರಷ್ಟಾಚಾರಕ್ಕೆ ಪುರಸಭೆ ಮುಖ್ಯಾಧಿಕಾರಿ ನೇರ ಹೊಣೆಗಾರರಾಗಿದ್ದು, ಮುಖ್ಯಾಧಿಕಾರಿಗಳನ್ನು ಹಾಗೂ ಲಂಚ ಪಡೆಯುತ್ತಿರುವ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಶಾಸಕರಿಗೆ ಹಾಗೂ ಸಚಿವರಿಗೆ ದಿಗ್ಬಂಧನ ಚಳವಳಿ ಆರಂಭಿಸಲಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳೊಂದಿಗೆ ವಾಗ್ವಾದ

ಪುರಸಭೆ ಕಾಂಪೌಂಡಿಗೆ ಹಾಕಿರುವ ದರಪಟ್ಟಿ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಪ್ರತಿಭಟನಾಕಾರರಿಗೆ ಹೇಳಿದಾಗ, ಪುರಸಭೆಯಲ್ಲಿ ವಿವಿಧ ಪ್ರಮಾಣಪತ್ರ ನೀಡಲು ಸರ್ಕಾರದ ರೇಟ್ ಬೋರ್ಡ್ ಇಲ್ಲ. ನೀವು ಪುರಸಭೆಯಲ್ಲಿ ಸರ್ಕಾರದ ದರಪಟ್ಟಿ ಹಾಕುವವರೆಗೂ ಇದನ್ನು ತೆಗೆಯುವುದಿಲ್ಲ ಎಂದಾಗ, ಪ್ರತಿಭಟನಾಕಾರರು ಹಾಗೂ ಮುಖ್ಯಾಧಿಕಾರಿಗಳಿಗೆ ವಾಗ್ವಾದ ನಡೆಯಿತು.

ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ

ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆ ಕಾರ್ಯಪಾಲಕ ಅಭಿಯಂತರ ವೆಂಕಟೇಶ ಹುಣಸಿಗಿಡದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಭ್ರಷ್ಟಾಚಾರ ಅರೋಪವಿರುವ ಸಿಬ್ಬಂದಿ ಮೇಲೆ ತನಿಖೆ ಕೈಗೊಳ್ಳಲಾಗುವುದು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಬಿಜೆಪಿ ಕಾರ್ಯಕರ್ತರು ಒಪ್ಪಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಸಿಬ್ಬಂದಿ ಅಮಾನತುಗೊಳಿಸುವವರೆಗೂ ಸರದಿ ಸತ್ಯಾಗ್ರಹ ಹಿಂದಕ್ಕೆ ಪಡೆಯುವುದಿಲ್ಲ ಎಂದು ಘೋಷಿಸಿದರು.
ಮುಖಂಡರಾದ ರಂಗಪ್ಪ ಶೇಬಿನಕಟ್ಟಿ, ರವೀಂದ್ರ ಪಟ್ಟಣಶೆಟ್ಟಿ, ಅಶೋಕ ಹೆಗಡೆ, ಕಮಲಕಿಶೋರ ಮಾಲಮಾಣಿ, ವಸಂತಸಾ ಧೋಂಗಡೆ, ಮಧುಸೂಧನ ರಾಂದಡ, ಗಣೇಶ ಶೀಲವಂತ, ಶಿವಾನಂದ ಯಣ್ಣಿ, ಭುವನೇಶ ಪೂಜಾರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net