

ಅರಕೇರಾ: ಸುಣ್ಣದಕಲ್ ಗ್ರಾಮದಲ್ಲಿ ಸೇದುವ ಬಾವಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ಓಡಾಡಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಗಾಣದಾಳ ಗ್ರಾಪಂ ವ್ಯಾಪ್ತಿಯ ಸುಣ್ಣದಕಲ್ ಗ್ರಾಮದಲ್ಲಿ ಒಂದೂವರೆ ಸಾವಿರ ಜನಸಂಖ್ಯೆ ಇದೆ. ಸೇದುವ ಬಾವಿ ರಸ್ತೆ ಹೊಲ- ಗದ್ದೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಊರಿನ ಚರಂಡಿ ನೀರು ಇದೇ ರಸ್ತೆಗೆ ಸೇರುತ್ತಿದೆ. ಸುಮಾರು 2 ಕಿ.ಮೀ. ರಸ್ತೆ ಮೇಲೆ ಚರಂಡಿ ತ್ಯಾಜ್ಯ ಹರಿಯುತ್ತಿದ್ದು, ಜನರು ನಡೆದಾಡುವುದಕ್ಕೂ ಯೋಗ್ಯವಿಲ್ಲದಂತಾಗಿದೆ. ವಾಹನಗಳಲ್ಲಿ ತೆರಳುವುದೂ ದುಸ್ತರವಾಗಿದೆ.
ಸುಮಾರು 8 ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಜಮೀನು ಹಾಗೂ ಮನೆಗಳಿಗೆ ದ್ವಿಚಕ್ರ ವಾಹನ, ಎತ್ತಿನ ಬಂಡಿ, ಟ್ರ್ಯಾಕ್ಟರ್ ಮೂಲಕ ತೆರಳುವ ರೈತರು ತುಂಬಾ ಕಷ್ಟಪಡುತ್ತಾರೆ. ದ್ವಿಚಕ್ರ ವಾಹನ ಸವಾರರು ಕೆಸರಿನಲ್ಲಿ ಹಲವು ಬಾರಿ ಬಿದ್ದಿರುವ ಉದಾಹರಣೆ ಇದೆ.
ರಸ್ತೆಯುದ್ದಕ್ಕೂ ಜಾಲಿ ಗಿಡಗಳು ಆವರಿಸಿವೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಕೃಷಿ ಚಟುವಟಿಕೆಗಳಿಗೆ ರೈತರು ಜಮೀನಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ರಸ್ತೆ ಬಿಟ್ಟು ಪಕ್ಕದಲ್ಲಿರುವ ಜಮೀನುಗಳನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ ಇದೆ.
ಚರಂಡಿ ತ್ಯಾಜ್ಯ ಬೇರೆಡೆ ಹರಿಯುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ರೈತರು ಸುರಕ್ಷಿತವಾಗಿ ಜಮೀನುಗಳಿಗೆ ಓಡಾಡುವುದಕ್ಕೆ ರಸ್ತೆ ನಿರ್ಮಾಣ ಮಾಡಬೇಕು ಎಂದು ರೈತರಾದ ಶಿವರಾಜ ಕಾರ್ಲಕುಂಟಿ, ಖಾಸೀಂ ಸಾಬ್, ಅಬ್ದುಲ್ ಸಾಬ್ ಹವಲ್ದಾರ್, ಇಮಾಮ್ ಸಾಬ್, ಅಜ್ಮೀರ್ ಸಾಬ್, ಬಸವರಾಜ ಕೋಟೆಕಲ್, ರಹಿಮಾನ್ ಸಾಬ್, ಶಿವಪ್ಪ ಬೊಮ್ಮನಾಳ, ರಾಘವೇಂದ್ರ ಕೋಟೆಕಲ್, ಅಮರೇಶ, ಚನ್ನಬಸವ, ಶರಣಬಸವ, ಹನುಮಗೌಡ ಮಾಲಿ ಪಾಟೀಲ್ ಆಗ್ರಹವಾಗಿದೆ.