

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
7ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ಅಂಗವಿಕಲ ನೌಕರರಿಗೆ ಶೇ. 6ರಷ್ಟು ಪ್ರಯಾಣ ಭತ್ಯೆ ಆದೇಶ ಹೊರಡಿಸಬೇಕು. ಎ ಮತ್ತು ಬಿ ವೃಂದದ ಹುದ್ದೆಗಳಿಗೂ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಬೇಕು. ಸೇವಾ ಅವಧಿಯಲ್ಲಿ ಎಷ್ಟು ಬಾರಿಯಾದರೂ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಾಸಿಕ 5,000 ರೂಪಾಯಿ ಪೋಷಣಾ ಭತ್ಯೆ ಮಂಜೂರು ಮಾಡಬೇಕು. ಅಂಗವಿಕಲರ ಮೇಲಾಗುತ್ತಿರುವ ಶೋಷಣೆ ತಪ್ಪಿಸಲು ಕಠಿಣ ಕ್ರಮ ಜರುಗಿಸಬೇಕು. ಶಕ್ತಿ ಯೋಜನೆ ಮಾದರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಬೇಕು. ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಕುರಿತು ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಸಂಘದ ಅಧ್ಯಕ್ಷ ಡಾ. ಶಿವಾನಂದ ಖವಟಕೊಪ್ಪ, ಪದಾಧಿಕಾರಿಗಳಾದ ರಮೇಶ ತಳವಾರ, ಶಿವಾನಂದ ಸವಸುದ್ದಿ, ಸಂತೋಷ ಕರಮಳ್ಳವರ, ಮಂಜುನಾಥ ಹಿರೇಮಠ, ಇತರರಿದ್ದರು.