ಅಂಗನವಾಡಿ ಕಾರ್ಯಕರ್ತೆಯರ ಬಡಿದಾಟ

Anganwadi workers, Fighting, Muddebihala, Government Hospital, Shanta Mamani, Renuka Ramakoti, Women Child Development Department,
ಮುದ್ದೇಬಿಹಾಳ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ನಂ. 1 ರಲ್ಲಿ ಕಾರ್ಯಕರ್ತೆಯರಾದ ಶಾಂತಾ ಮಾಮನಿ, ರೇಣುಕಾ ರಾಮಕೋಟಿ ಪರಸ್ಪರ ಬಡಿದಾಡಿಕೊಳ್ಳುತ್ತಿರುವುದು.
Published on

ಮುದ್ದೇಬಿಹಾಳ: ಅಂಗನವಾಡಿ ಕಾರ್ಯಕರ್ತೆಯರಿಬ್ಬರು ತಮ್ಮದೇ ಅಂಗನವಾಡಿ ಕೇಂದ್ರದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದು, ಒಬ್ಬರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಪಟ್ಟಣದ ಪಿಲೇಕೆಮ್ಮನಗರದ ಅಂಗನವಾಡಿ ಕೇಂದ್ರ ನಂ.1 ರಲ್ಲಿ ಕಾರ್ಯಕರ್ತೆಯರಾದ ಶಾಂತಾ ಮಾಮನಿ, ರೇಣುಕಾ ರಾಮಕೋಟಿ ಅವರು ಶುಕ್ರವಾರ ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಮೊದಲು ಅದೇ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿದ್ದ ಶಾಂತಾ ಅವರನ್ನು ಸಾರ್ವಜನಿಕರ ದೂರು ಮತ್ತು ಆಡಳಿತದ ಹಿತದೃಷ್ಟಿಯಿಂದ ಸಿಡಿಪಿಒ ವರದಿ ಆಧರಿಸಿ ಸಂಗಮೇಶ್ವರ ನಗರದ 1ನೇ ಅಂಗನವಾಡಿ ಕೇಂದ್ರಕ್ಕೆ ಸ್ಥಾನಪಲ್ಲಟ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಪುರ ಕಚೇರಿಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದರು.

ಅವರ ಸ್ಥಾನಕ್ಕೆ ರೇಣುಕಾ ಅವರನ್ನು ಪ್ರಭಾರಿಯಾಗಿ ನಿಯೋಜಿಸಲಾಗಿತ್ತು. ರೇಣುಕಾ ಅವರನ್ನು ಕೇಂದ್ರದ ಮೇಲ್ವಿಚಾರಕರು ಗುರುವಾರ ಕರ್ತವ್ಯಕ್ಕೆ ಹಾಜರು ಮಾಡಿಸಿದ್ದರು. ಶುಕ್ರವಾರ ಬೆಳಗ್ಗೆ ಕೇಂದ್ರಕ್ಕೆ ಬಂದಿದ್ದ ಶಾಂತಾ ಮತ್ತು ರೇಣುಕಾ ನಡುವೆ ಮಕ್ಕಳ ಎದುರೇ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಆಗಿದೆ. ನಂತರ ಏಕಾಏಕಿ ಇಬ್ಬರೂ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ.

ಈ ಗದ್ದಲ ಕೇಳಿದ ಅಕ್ಕಪಕ್ಕದವರು ಕೇಂದ್ರಕ್ಕೆ ಬಂದು ಜಗಳ ಬಿಡಿಸಿ ಬುದ್ಧಿವಾದ ಹೇಳಿದ್ದಾರೆ. ಅಷ್ಟರಲ್ಲಿ ರೇಣುಕಾ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ರೇಣುಕಾ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಇವರಿಬ್ಬರ ಮಧ್ಯೆ ಮೊದಲಿನಿಂದಲೂ ಹಗೆತನ ಇದ್ದದ್ದು ಈ ಜಗಳಕ್ಕೆ ಕಾರಣ ಎಂದು ಕೇಂದ್ರದ ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.

ಈ ಕುರಿತು ಸಿಡಿಪಿಒ ಶಿವಮೂರ್ತಿ ಕುಂಬಾರ ಅವರು ವಿಜಯವಾಣಿಯೊಂದಿಗೆ ಮಾತನಾಡಿ ಘಟನೆ ಗಮನಕ್ಕೆ ತಂದಿದೆ. ಕಚೇರಿ ಕೆಲಸದ ನಿಮಿತ್ತ ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಹೋಗಿ ಬರುತ್ತಿದ್ದೇನೆ. ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಇಬ್ಬರೂ ಜಗಳ ಮಾಡಿರುವ ಕುರಿತು ಮೇಲಧಿಕಾರಿಗಳಿಗೆ ಮೌಖಿಕ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net