

ಹಾನಗಲ್ಲ: ಏಳು ದಶಕಗಳ ಶೈಕ್ಷಣಿಕ ಸೇವೆಯ ಇತಿಹಾಸ ಹೊಂದಿರುವ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘಕ್ಕೆ ಸದಸ್ಯತ್ವ ನಿರಾಕರಣೆ ಮಾಡಲಾಗುತ್ತಿದೆ. ದಾನಿಗಳು ನೀಡಿದ ಬೆಲೆ ಬಾಳುವ ಆಸ್ತಿಗಳನ್ನು ಮಾರುವ ಮೂಲಕ ಆಡಳಿತ ಮಂಡಳಿ ಸಂಸ್ಥೆಯ ಹಿತಕ್ಕೆ ಧಕ್ಕೆ ತರುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಸಿ. ಮಂಜುನಾಥ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ 1800 ಅಜೀವ ಸದಸ್ಯರಲ್ಲಿ ಸಾವಿರಾರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದು, ಈಗ ಕೇವಲ 238 ಸದಸ್ಯರುನ್ನು ಉಳಿಸಿದ್ದಾರೆ. ಇಲ್ಲಿನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ, ಕಾರ್ಯನಿರ್ವಾಹಕ ಅಧಿಕಾರಿಗಳು ಅತಿ ಹೆಚ್ಚು ಸದಸ್ಯರನ್ನು ತಮ್ಮ ಕುಟುಂಬದಲ್ಲೇ ಮಾಡಿಕೊಂಡು ಸಾರ್ವಜನಿಕ ಶಿಕ್ಷಣ ಸಂಸ್ಥೆಯನ್ನು ಖಾಸಗಿ ಆಸ್ತಿ ಎನ್ನುವಂತೆ ಪರಿವರ್ತಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಪಾಯಕಾರಿ ಬೆಳವಣಿಗೆ. ತಾಲೂಕಿನ ಶೈಕ್ಷಣಿಕ ಪ್ರೀತಿಯುಳ್ಳ 950ಕ್ಕೂ ಅಧಿಕ ಜನ ಸದಸ್ಯರಾಗಲು ಲಿಖಿತ ಅರ್ಜಿ ನೀಡಿದ್ದಾರೆ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಆಪಾದಿಸಿದರು.
ಒಂದೇ ಕುಟುಂಬದಲ್ಲಿ 25-30 ಜನ ಸದಸ್ಯರನ್ನು ಮಾಡಿಕೊಂಡಿದ್ದಲ್ಲದೆ ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದೆ ಸರ್ವಾಧಿಕಾರಿ ಧೋರಣೆ ಮೆರೆದಿದ್ದಾರೆ. ಹಾನಗಲ್ಲ ತಾಲೂಕಿನವರಿಗೆ ಮಾತ್ರ ಸದಸ್ಯತ್ವದ ಅವಕಾಶ ಇರುವಾಗ 20ಕ್ಕೂ ಹೆಚ್ಚು ಜನ ಹೊರಗಿನವರಿಗೆ ಸದಸ್ಯತ್ವ ನೀಡಿದ್ದಾರೆ. ಬೇರೆ ಶೈಕ್ಷಣಿಕ ಸಂಸ್ಥೆಯಲ್ಲಿ ಸದಸ್ಯರಿರುವ 8 ಜನರ ಸದಸ್ಯತ್ವ ಉಳಿಸಿಕೊಂಡಿದ್ದಾರೆ ಎಂದು ಮಂಜುನಾಥ ಆಪಾದಿಸಿದರು.
ಎಲ್ಲದಕ್ಕೂ ಮುಖ್ಯವಾಗಿ ಸಂಸ್ಥೆಗೆ ದಾನಿಗಳು ನೀಡಿದ ಆಸ್ತಿಗಳನ್ನು ಪರಭಾರೆ ಮಾಡುವ ಮೂಲಕ ಜನವಿರೋಧಿ ಕ್ರಮ ಕೈಗೊಂಡಿದ್ದಾರೆ. ಗಂಗಾನಗರದಲ್ಲಿನ 16 ಗುಂಟೆ ಮಾರಾಟ ಮಾಡಿದ್ದಲ್ಲದೆ, ಹೊಸ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ 20 ಗುಂಟೆ ಜಾಗ ದಾನ ಮಾಡಿದ್ದಾರೆ. ಇದಕ್ಕೆ ದೊಡ್ಡರಂಗಪ್ಪ ದಾಸರ ಮೆಮೋರಿಯಲ್ ಗ್ರಂಥಾಲಯ ಎಂದು ನಾಮಕರಣ ಮಾಡಲು ಸೂಚಿಸಿದ್ದರಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಕುಮಾರೇಶ್ವರ ಕಲಾಭವನಕ್ಕಾಗಿ ನೀಡಿದ್ದ 10 ಗುಂಟೆಯನ್ನು ಪುರಸಭೆಗೆ ಪರಭಾರೆ ಮಾಡಿದ್ದಾರೆ. ದಾನಿಗಳು ನೀಡಿದ ಮೂರು ಎಕರೆ ಜಮೀನನ್ನು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಪರಭಾರೆ ಮಾಡಲು ಈ ಹಿಂದೆಯೇ ಠರಾವು ಮಾಡಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಎನ್. ಪಾಟೀಲ, ಪ್ರೊ. ಸಿ.ಎಸ್.ಬಡಿಗೇರ, ಪ್ರೊ. ಎನ್.ಬಿ. ಬಣಕಾರ, ಪ್ರೊ. ವಿ.ಎನ್. ಪಾಟೀಲ, ವಕೀಲ ಅಣ್ಣಪ್ಪ ಚಿಕ್ಕಣ್ಣನವರ, ರುದ್ರಪ್ಪ ಸಿಂಧೂರ, ರುದ್ರಪ್ಪ ಬಳಿಗಾರ, ರವಿರಾಜ ತಿರುಮಲೆ, ಲೀಲಾವತಿ ಗುಡಿ ಇತರರಿದ್ದರು.
ಸಂಸ್ಥೆಯ ಸದಸ್ಯತ್ವ ನಿರಾಕರಣೆ ಮಾಡಿಲ್ಲ. ಕಾಲಕಾಲಕ್ಕೆ ಆಡಳಿತ ಮಂಡಳಿಯ ಒಟ್ಟಾಭಿಪ್ರಾಯದಂತೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ರ್ಚಚಿಸಿ ಸದಸ್ಯತ್ವ ನೀಡಲಾಗುತ್ತದೆ. ಸಂಸ್ಥೆಯ ಬಗೆಗಿನ ಆಪಾದನೆಗಳು ಅರ್ಥಹೀನ. ಆಪಾದನೆಗಳಿಗೆ ಸರಿಯಾದ ಸಮಯದಲ್ಲಿ ಉತ್ತರಿಸುತ್ತೇವೆ. ಬಿ.ಎಸ್. ಅಕ್ಕಿವಳ್ಳಿ, ಸಂಸ್ಥೆಯ ಅಧ್ಯಕ್ಷ