ಅಲ್ಲಮ ನಾಟಕ ಪ್ರದರ್ಶನ 30ರಂದು,  ವಿಶ್ವ ರಂಗಭೂಮಿ ದಿನಾಚರಣೆ

IMG_20250327_111934_812.jpg
Published on

ಹುಬ್ಬಳ್ಳಿ: ಇಲ್ಲಿಯ ರಂಗರೇಖಾ ಕಲಾ ಬಳಗದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಗದ ಜಂಗಮ ಅಲ್ಲಮ ಎಂಬ ನಾಟಕ ಪ್ರದರ್ಶನವನ್ನು ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಮಾ. 30ರಂದು ಸಂಜೆ 5ಕ್ಕೆ ಏರ್ಪಡಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಬಸವರಾಜ ಚಕ್ರಸಾಲಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಧು ಎಸ್. ಕಠಾರೆ ಕವಿಗಳು ರಚನೆ ಮಾಡಿರುವ ನಾಟಕವನ್ನು ತಮ್ಮ ನಿರ್ದೇಶನದಲ್ಲಿ ಉಚಿತವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಅದೇ ದಿನ ಅಲ್ಲಮಪ್ರಭು ದೇವರ ಜಯಂತಿ ಆಚರಣೆಯೂ ಇದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

ತುಕಾರಾಮ ಕಠಾರೆ ಸಂಗೀತ ನಿರ್ದೇಶನ, ಮಂಜುನಾಥ ಇಂಗಳಹಳ್ಳಿ ವಾದ್ಯವೃಂದ, ಮನೀಷ್ ಶಿಂಧೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು 35 ಕಲಾವಿದರು ಅಭಿನಯಿಸಿದ್ದಾರೆ. ಅಲ್ಲಮ ನಾಟಕದ ಎರಡನೇ ಪ್ರಯೋಗ ಇಲ್ಲಿ ನಡೆಯುತ್ತಿದೆ ಎಂದರು.

ರಂಗಕರ್ಮಿ ಪಕ್ಕೀರೇಶ ಮುಗುಳಿ ಮಾತನಾಡಿ, ರಂಗಕಲೆ ಉಳಿಸಿ ಬೆಳೆಸುವ ಉದ್ದೇಶದಿಂದ ಕಲಾ ಬಳಗವು ಹಲವು ವರ್ಷಗಳಿಂದ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುವುದು, ರಂಗ ಚಟುವಟಿಕೆ ನಿರಂತರ ನಡೆಯುವಂತೆ ಮಾಡಲು ತನ್ನದೇ ಆದ ಕೊಡುಗೆ ನೀಡುತ್ತಿದೆ. ನಾಟಕ ಪ್ರದರ್ಶನದ ನಂತರ ಹಿರಿಯ ಕಲಾವಿದರಿಗೆ ರಂಗ ಗೌರವ ನೀಡಲಾಗುವುದು ಎಂದರು.

ಅಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶಹರ ಘಟಕದ ಅಧ್ಯಕ್ಷೆ ವಿದ್ಯಾ ವಂಟಮೂರಿ ಪ್ರದರ್ಶನ ಉದ್ಘಾಟಿಸುವರು. ಹಿರಿಯ ರಂಗಭೂಮಿ ಕಲಾವಿದೆ ವೀಣಾ ಅಠವಲೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಹವ್ಯಾಸಿ ಕಲಾವಿದ ಸುಭಾಸ ಮೆಹರವಾಡೆ, ಪ್ರಜ್ವಲ ಅನವಾಲ, ಸುನೀಲ ಕಾಂಬಳೆ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net