ಸರ್ವಾಧ್ಯಕ್ಷರ ಮೆರವಣಿಗೆ ವರ್ಣರಂಜಿತವಾಗಿರಲಿ: ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸೂಚನೆ

All India Kannada Literature Conference Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ವರ್ಣರಂಜಿತ ಆರಂಭ ನೀಡಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೆರವಣಿಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸುವುದೆಂದರೆ ಕನ್ನಡ ನಾಡು-ನುಡಿ ಸಾಹಿತ್ಯಕ್ಕೆ ಗೌರವ ಸಲ್ಲಿಸಿದಂತೆ. ಹಾಗಾಗಿ, ಮೆರವಣಿಗೆಯನ್ನು ಯಾವುದೇ ಲೋಪವಿಲ್ಲದಂತೆ ಅರ್ಥಪೂರ್ಣ, ಆಕರ್ಷಕ ಮತ್ತು ವೈಭವಯುತವಾಗಿ ಆಯೋಜಿಸಬೇಕು. ಮೆರವಣಿಗೆಯ ಯಶಸ್ವಿಯಾದರೆ ಸಮ್ಮೇಳನವೂ ಯಶಸ್ಸು ಕಾಣಲಿದೆ ಎಂದರು.

ನಗರದ ಸರ್‌ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಿಸಬೇಕು. ಆರಂಭ ಸ್ಥಳದಿಂದ ಮುಖ್ಯ ವೇದಿಕೆವರೆಗೆ ಸುಮಾರು 6 ಕಿ.ಮೀ ದೂರವಿದ್ದು, ಕ್ರಮಿಸಲು 3 ರಿಂದ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಕನ್ನಡ ಭಾಷೆಯನ್ನು ಮೆರೆಸುವಂತೆ ಮೆರವಣಿಗೆ ಇರಲಿದ್ದು, ಅಂದು ಸಂಪೂರ್ಣ ಕನ್ನಡ ಮಯವಾಗಿರಬೇಕು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕನ್ನಡ ಬಾವುಟಗಳಿಂದ ಸಿಂಗಾರ ಮಾಡುವುದು. ಕುಡಿಯುವ ನೀರು, ಕಬ್ಬಿನ ರಸ, ಮಜ್ಜಿಗೆ ಹಾಗೂ ಪಾನಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡದ ಅಸ್ಮಿತೆ ಸಾರುವಂತೆ ಸಮ್ಮೇಳಾನಾಧ್ಯಕ್ಷರ ರಥ ಅಲಂಕರಿಸಲಾಗುವುದು. ಮೆರವಣಿಗೆಯಲ್ಲಿ ಮಂಡ್ಯ, ಹೊರ ಜಿಲ್ಲೆ, ಗಡಿನಾಡು ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಗುವುದು. ಕೀಲು ಕುದುರೆ, ಕರಡಿ ಮಜಲು, ಪೂಜಾ ಕುಣಿತ, ಚಂಡೆ ಕುಣಿತ, ತಮಟೆ, ಡೊಳ್ಳು ಕುಣಿತ, ಕೊಂಬು ಕಹಳೆ ಸೇರಿದಂತೆ ವಿವಿಧ ಪ್ರಕಾರಗಳ ಜನಪದ ಕಲಾವಿದರ ದಂಡು ಮೆರವಣಿಗೆಗೆ ಉತ್ಸಾಹ ಮತ್ತು ಶಕ್ತಿ ತುಂಬಲಿದ್ದು, ಜಾನಪದ ಶ್ರೀಮಂತಿಕೆಯನ್ನು ಬಿಂಬಿಸಲಿವೆ. ಸ್ಕೌಟ್ಸ್ ಮತ್ತು ಎನ್‌ಎಸ್‌ಎಸ್ ತಂಡ ಭಾಗವಹಿಸಲಿವೆ. ಕನ್ನಡ ನಾಡು ನುಡಿ ಸಂಸ್ಕೃತಿ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ. ಹಾಗಾಗಿ, ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮತ್ತು ಕಾಲೇಜುಗಳ ಮಕ್ಕಳ ಹೆಚ್ಚಿನ ಭಾಗವಹಿಸಲು ಅನುಕೂಲವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ, ಶಿಕ್ಷಣ ಇಲಾಖೆ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು ಎಂದು ಮಾಹಿತಿ ನೀಡಿದರು.

ಸಮಿತಿಯ ಸಂಚಾಲಕ ಕಾರಸವಾಡಿ ಮಹದೇವು ಮಾತನಾಡಿ, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಲಾ ತಂಡಗಳು ಆಗಮಿಸಲಿದ್ದು, ಸುಮಾರು 1000 ಕಲಾವಿದರು ಭಾಗವಹಿಸಲು ಅವಕಾಶ ಕಲ್ಪಿಸಬೇಕು. ವಿವಿಧ ಪ್ರಕಾರಗಳಲ್ಲಿ ಕಲಾತಂಡಗಳಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಸಮಿತಿಯ ಉಪಾಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಎಲ್ಲ ಜಿಲ್ಲೆಗಳಿಂದಲೂ ಪ್ರತಿನಿಧಿಕವಾಗಿ ಒಂದು ಕಲಾತಂಡವಿರಬೇಕು. ಗಡಿನಾಡುಗಳಿಂದ ಒಂದೊಂದು ಉತ್ತಮ ತಂಡವನ್ನು ಕರೆಸಬೇಕು. 87 ಎತ್ತಿನಗಾಡಿಗಳಲ್ಲಿ 87 ಸಮ್ಮೇಳನಾಧ್ಯಕ್ಷರ ಭಾವಚಿತ್ರವನ್ನು ಮೆರವಣಿಗೆ ಮಾಡಬೇಕು ಎಂದರು.

ಸದಸ್ಯ ವೆಂಕಟಗಿರಿಯ್ಯ ಮಾತನಾಡಿ, ಸಮ್ಮೇಳನದ ದಿನವೇ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಬೇಕು. ಮೆರವಣಿಗೆ ವೈಭವಯುತವಾಗಿ ಇರಬೇಕು. ಮುಖ್ಯ ವೇದಿಕೆಗೆ ಮೆರವಣಿಗೆ ಸುಮಾರು ಬೆಳಗ್ಗೆ 11 ಗಂಟೆ ವೇಳೆಗೆ ತಲುಪುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಮೆರವಣಿಗೆ ಆರಂಭದ ಸಮಯವನ್ನು ನಿರ್ಧರಿಸುವುದು ಸೂಕ್ತ. ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ದೊಡ್ಡದಿರುವುದರಿಂದ ಸ್ತಬ್ಧಚಿತ್ರವಿರುವುದು ಸೂಕ್ತ ಎಂದು ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಮಾತನಾಡಿ, ಮೆರವಣಿಗೆಯು ನಗರದಲ್ಲಿ ಸಾಂಸ್ಕೃತಿಕ ವಾತಾವರಣ, ಕನ್ನಡದ ವಾತಾವರಣವನ್ನು ನಿರ್ಮಿಸುವಂತಿರಬೇಕು. ಮೆರವಣಿಗೆ ವೈಭಯುತವಾಗಿ ಇರಬೇಕು. ಕನ್ನಡ ರಥ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಂಚರಿಸುವ ಮೂಲಕ ಪ್ರಚಾರ ನಡೆಸಬೇಕು ಎಂದು ಹೇಳಿದರು. ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಮೆರವಣಿಗೆ ಮಾಡುವ ಮೂಲಕ ಪರಿಸರ ಸ್ನೇಹಿ ಸಂದೇಶವನ್ನು ತಲುಪಿಸುವಂತೆ ಆಗಬೇಕು.

ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸದಸ್ಯ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಕನ್ನಡ ಸೇನೆ ಮಂಜುನಾಥ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಕೀಲಾರ ಕೃಷ್ಣೇಗೌಡ, ಯೋಗಣ್ಣ, ನಾಗಮ್ಮ, ಕುಬೇರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net