ಅಕ್ಕಮಹಾದೇವಿ ಮಹಿಳಾ ವಿವಿಗೆ ನೂತನ ಕುಲಪತಿ ನೇಮಕ, ಪ್ರೊ.ವಿಜಯಾಗೆ ಒಲಿದು ಬಂದ ವಿಸಿ ಸ್ಥಾನ

KSWU VC
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕವಾಗಿರುವ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಪ್ರೊ.ನಾಮದೇವಗೌಡ, ಕುಲಸಚಿವ ಪ್ರೊ.ಶಂಕರಗೌಡ ಸೋಮನಾಳ ಇದ್ದಾರೆ.
Published on

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಆರನೆಯ ಕುಲಪತಿಯ ನೇಮಕದ ಗೊಂದಲಕ್ಕೆ ತೆರೆ ಬಿದ್ದಿದ್ದು, ಇದೇ ಪ್ರಥಮ ಬಾರಿಗೆ ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಜಯಪುರದವರೇ ಆಗಿರುವ ವಿವಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಅನ್ವಯವಾಗುವಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಥಾವರಚಂದ ಗೆಹಲೋಟ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಪ್ರೊ.ಬಿ.ಕೆ. ತುಳಸಿಮಾಲ ನಿವೃತ್ತಿಯಿಂದಾಗಿ 2025 ಜ.25ರಿಂದ ತೆರವಾದ ಕುಲಪತಿ ಹುದ್ದೆಗೆ ಟಿ. ಶಾಂತಾದೇವಿ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಿಸಲಾಗಿತ್ತು. ಬಳಿಕ ಎನ್.ಎಲ್. ಮಲ್ಲಿಕಾರ್ಜುನ, ನಾಮದೇವಗೌಡ ಅವರನ್ನು ಹಂಗಾಮಿಯಾಗಿ ನೇಮಕ ಮಾಡಲಾಗಿತ್ತು. ಕುಲಪತಿ ನೇಮಕ ವಿಳಂಬವಾದ ಹಿನ್ನೆಲೆ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಿನ್ನಡೆಯಾಗಿತ್ತು. ಹೀಗಾಗಿ ತ್ವರಿತವಾಗಿ ಕುಲಪತಿಯನ್ನು ನೇಮಕ ಮಾಡುವ ಒತ್ತಾಯ ಕೇಳಿ ಬಂದಿತ್ತು.

ಪೈಪೋಟಿ-ಗೊಂದಲಕ್ಕೆ ತೆರೆ

ಕುಲಪತಿಗಳ ನೇಮಕ ಪ್ರಕ್ರಿಯೆಗಾಗಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಅಧ್ಯಕ್ಷತೆಯ ಶೋಧನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಬೆಂಗಳೂರಿನ ಪ್ರೊ.ನಾಗರತ್ನ, ಮಂಗಳೂರಿನ ಪ್ರೊ.ಸರೊಜಾ ಹಾಗೂ ವಿಜಯಪುರದ ಅಕ್ಕಮಹಾದೇವಿ ವಿವಿಯ ಪ್ರೊ.ವಿಜಯಾ ಕೋರಿಶೆಟ್ಟಿ ಹೆಸರು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ರಾಜ್ಯ ಸರ್ಕಾರ ಕೂಡ ಇದೇ ಶಿಫಾರಸ್ಸು ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಈ ಮಧ್ಯೆ ಸಾಕಷ್ಟು ಪೈಪೋಟಿ ಕೂಡ ಕಂಡು ಬಂದಿತ್ತು. ವಿಶ್ವ ವಿದ್ಯಾಲಯದ ಸ್ಥಾಪನೆಯಾದಾಗಿನಿಂದ ಅನ್ಯ ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರೇ ಕುಲಪತಿಗಳಾಗಿ ನೇಮಕಗೊಂಡಿದ್ದು ಈ ಬಾರಿ ಸ್ಥಳೀಯರಿಗೇ ಅವಕಾಶ ಕೊಡಬೇಕೆಂಬ ಕೂಗು ಕೇಳಿ ಬಂದಿತ್ತು. ಇದೀಗ ಸ್ಥಳೀಯರೇ ಆಗಿರುವ ವಿಜಯಾ ಕೋರಿಶೆಟ್ಟಿ ಅವರನ್ನು ಕುಲಪತಿಯಾಗಿ ನೇಮಿಸಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಒಲಿದು ಬಂದಂತಾಗಿದೆ.

ಅಧಿಕಾರ ಹಸ್ತಾಂತರ

ನೂತನ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಗುರುವಾರ ವಿಶ್ವ ವಿದ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ವಿವಿಯ 6ನೆಯ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿಯಾಗಿದ್ದ ಪ್ರೊ.ನಾಮದೇವಗೌಡ, ಕುಲಸಚಿವ ಶಂಕರಗೌಡ ಸೋಮನಾಳ, ಸಿಂಡಿಕೇಟ್ ಸದಸ್ಯರಾದ ಶಿವಯೋಗೆಪ್ಪ ಮಾಡ್ಯಾಳ, ಅತೀಕ್ ಮಕಾನದಾರ, ಸೈದಪ್ಪ ಮಾದರ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net