

ಚಿತ್ರದುರ್ಗ: ಜಿಲ್ಲೆಯಲ್ಲಿ ಖಾಲಿ ಇರುವ ಪಶು ವೈದ್ಯರ ನೇಮಕಕ್ಕೆ ಕ್ರಮವಹಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್. ಮಹೇಶ್ವರಪ್ಪ ಪಶು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ರೈತರು ಜಾನುವಾರುಗಳ ಮೇಲೆ ಸಾಕಷ್ಟು ಅವಲಂಬಿತರಾಗಿದ್ದಾರೆ. ಪಶು ವೈದ್ಯರ ಕೊರತೆಯಿಂದ ಜಾನುವಾರು ರೋಗಗಳಿಗೆ ತುತ್ತಾಗುತ್ತಿವೆ. ಇದನ್ನು ತಪ್ಪಿಸಲು ಪಶು ವೈದ್ಯರ ನೇಮಕ ಅವಶ್ಯಕ ಎಂದರು.
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕೀಟಬಾಧೆ, ರೋಗಗಳ ನಿರ್ವಹಣೆ ಸಂಬಂಧ ರೈತರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. ಸಾಲ-ಸೌಲಭ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಲೀಡ್ ಬ್ಯಾಂಕ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರನ್ನು ಸಭೆಗೆ ಆಹ್ವಾನಿಸಬೇಕು ಎಂದರು.
ಸಮಿತಿ ಜಿಲ್ಲಾ ಪ್ರತಿನಿಧಿ ಕೆ. ಜಗದೀಶ್ ಕಂದಿಕೆರೆ ಮಾತನಾಡಿ, ಹಿರಿಯೂರು ತಾಲೂಕಲ್ಲಿರುವ ಪಶು ವೈದ್ಯರ ಖಾಲಿ ಹುದ್ದೆಗಳ ಕುರಿತು ಮಾಹಿತಿ ಕೇಳಿದರು. ಸರ್ಕಾರದ ಯೋಜನೆ, ತರಬೇತಿ, ಕ್ಷೇತ್ರೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಕೃಷಿಕ ಸಮಾಜದ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಡಿಡಿ ಡಾ.ಎನ್. ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 34 ಪಶು ವೈದ್ಯರ ಹುದ್ದೆಗಳು, 235 ಪಶು ವೈದ್ಯಕೀಯ ಪರಿವೀಕ್ಷಕರು ಹಾಗೂ 231 ಡಿ-ಗ್ರೂಪ್ ಖಾಲಿ ಹುದ್ದೆಗಳಿವೆ. ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ಮಾತನಾಡಿ, ಶೇ. 93 ರೈತರು ಬೋರ್‌ವೆಲ್ ಆಧಾರಿತ ಕೃಷಿ ಅವಲಂಬಿಸಿದ್ದಾರೆ. ಜಿಲ್ಲೆಯ ಕೃಷಿ ಚಟುವಟಿಕೆಗೆ ಕೃಷಿ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಸಲಹೆ, ಸೂಚನೆಗಳು ರೈತರಿಗೆ ಅಗತ್ಯವಿದೆ ಎಂದರು.
ರಾಜ್ಯದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಶೇ.95 ಪ್ರಮಾಣದಲ್ಲಿ ಹೊಸದುರ್ಗ ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಕಳೆದ ವರ್ಷ ಸಾ ಮೆ ಹೊಸ ತಳಿ ಪರಿಚಯಿಸಲಾಗಿದೆ. ಅದರಂತೆ ನವಣೆ, ಹಾರಕ, ಬರಗು, ಊದಲು ಬೆಳೆಗಳ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಬೇಕೆಂದು ಸಮಿತಿ ಪ್ರಧಾನ ಕಾರ್ಯದರ್ಶಿ ರಾಗಿ ಶಿವಮೂರ್ತಪ್ಪ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಮಿತಿ ಉಪಾಧ್ಯಕ್ಷ ಧರಣೇಶ್, ರಾಜ್ಯ ಪ್ರತಿನಿಧಿ ವಿ.ಜಿ. ಪರಮೇಶ್ವರಪ್ಪ, ಖಜಾಂಚಿ ಭಕ್ತ ಪ್ರಹ್ಲಾದ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಎಂ.ಎಸ್. ನವೀನ್, ಸಿ.ಎಚ್. ಕಾಂತರಾಜ್, ಬಿ.ಟಿ. ಜಗದೀಶ್, ಜಿಲ್ಲಾ ಪ್ರತಿನಿಧಿಗಳಾದ ಕೇಶವ, ಶಶಿಧರ್, ಎಸ್. ರಮೇಶಪ್ಪ ಇತರರು ಇದ್ದರು.