ಲಂಚಕ್ಕೆ ಬೇಡಿಕೆಯಿಟ್ಟವರ ಮೇಲೆ ಕ್ರಮವಾಗಲಿ

nazir
nazir
Published on

ರಾಯಚೂರು ಜಿಲ್ಲೆಯ ಬಳಗಾನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳು ಲಂಚ ಹಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಗೊಳಿಸಬೇಕೆಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್.ನಜೀರ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಫಾರಂ-3 ಖಾತಾ ಪಡೆಯಲು ಖಾಜಾಸಾಬ ಎಂಬುವವರು ಅರ್ಜಿ ಹಾಕಿದ್ದು, ಫಾರಂ ನೀಡಲು ಬಳಗಾನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವುಕುಮಾರ ಪ್ರತಿ ಎಕರೆಗೆ 1.20 ಲಕ್ಷ ರೂ.ಗಳಂತೆ ಏಳು ಎಕರೆಗೆ 7.20 ಲಕ್ಷ ರೂ.ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು.

5 ಲಕ್ಷ ರೂ.ಗಳನ್ನು ಖಾಜಾಸಾಬ ರವರು ಅಧ್ಯಕ್ಷನ ಸಹೋದರ ಮೂಕಪ್ಪರಿಗೆ ನೀಡಿದ್ದಾರೆ. ಉಳಿದ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡಲು ನಿರಾಕರಿಸಿದ್ದರಿಂದ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ರಿಯಲ್ ಎಸ್ಟೇಟ್ ಮಾಡುವ ಖಾಜಾಸಾಬ ಮೂರು ತಿಂಗಳನ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಖಾತಾ ನೀಡಲು ಮುಂದಾಗಿಲ್ಲ. ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿಯೇ ಹಣ ಬೇಡಿಕೆಯಿಟ್ಟಿರುವ ವಿಡಿಯೋಗಳಿವೆ.

ಆದರಿಂದ ಮುಖ್ಯಾಧಿಕಾರಿ ಸತ್ಯನಾರಾಯಣ ಸಹ ಅಕ್ರಮಕ್ಕೆ ಅಧ್ಯಕ್ಷರು ಹಾಗೂ ಅವರ ಸಹೋದರ ಮೂಕಪ್ಪನವರೊಂದಿಗೆ ಕೈ ಜೋಡಿಸಿದ್ದಾರೆ. ಕೂಡಲೇ ಸಂಬಂಧಿಸಿದವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಗೊಳಿಸಬೇಕು. ಇಲ್ಲದೇ ಹೋದರೆ ಸಾಕ್ಷ್ಯಾಧಾರಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ಕಂದೂರು ರಾಘವೇಂದ್ರ, ವಿಶ್ವನಾಥ ನಾಯ್ಡು, ಬಸವರಾಜ ಮಸ್ಕಿ, ಶರಣಬಸವ ಕವಿತಾಳ, ರಾಮಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net