ದಸರಾದ ಆರಂಭದಲ್ಲೇ ಒಂದು ದೊಡ್ಡ ದುರಂತ ತಪ್ಪಿತು!

ಮೈಸೂರು ನಗರದ ಗನ್‌ಹೌಸ್‌ನಲ್ಲಿ ಮುರಿದು ಬಿದ್ದ ದಸರಾ ದೀಪಾಲಂಕಾರದ ಕಟೌಟ್
ಮೈಸೂರು ನಗರದ ಗನ್‌ಹೌಸ್‌ನಲ್ಲಿ ಮುರಿದು ಬಿದ್ದ ದಸರಾ ದೀಪಾಲಂಕಾರದ ಕಟೌಟ್
Published on: 

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆರಂಭದಲ್ಲೇ ನಗರದಲ್ಲಿ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಗನ್‌ಹೌಸ್ ವೃತ್ತದ ಬಳಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರದ ಬೃಹತ್ ಕಟೌಟ್ ಏಕಾಏಕಿ ಮುರಿದು ಬಿದ್ದಿದ್ದು, ಸ್ಥಳದಲ್ಲಿ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಅಪ್ಪಳಿಸಿದ್ದು, ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗನ್‌ಹೌಸ್ ವೃತ್ತವು ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ಪ್ರಮುಖ ಪ್ರದೇಶವಾಗಿದೆ. ಕಟೌಟ್ ಅಳವಡಿಸಲಾಗಿದ್ದ ಸ್ಥಳದ ಸಮೀಪವೇ ಜನರು ಓಡಾಡುತ್ತಿದ್ದರು. ಕಟೌಟ್ ಏಕಾಏಕಿ ಮುರಿದು ನೆಲಕ್ಕೆ ಅಪ್ಪಳಿಸಿದ್ದು, ಅಲ್ಲಿಯೇ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಬಿದ್ದಿದ್ದು, ಟಿಟಿ ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ.

ಕಟೌಟ್ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕದಿಂದ ಓಡಿಹೋಗಿದ್ದಾರೆ. ವಾಹನದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಘಟನೆಯಿಂದ ಕಂಗಾಲಾಗಿದ್ದಾರೆ. ಕಟೌಟ್ ಬೀಳುವ ಸಮಯದಲ್ಲಿ ವಾಹನದ ಬದಲಿಗೆ ಸಾರ್ವಜನಿಕರ ಮೇಲೆ ಬಿದ್ದಿದ್ದರೆ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿದ್ದರೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ದಸರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಆಕರ್ಷಕ ಕಟೌಟ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಗನ್‌ಹೌಸ್ ವೃತ್ತದ ಬಳಿ ಅಳವಡಿಸಲಾಗಿದ್ದ ಬೃಹತ್ ಕಟೌಟ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ಮುರಿದು ಬಿದ್ದಿರುವುದು ಕಾಮಗಾರಿಯ ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೃಹತ್ ಗಾತ್ರದ ವಿದ್ಯುತ್ ದೀಪಾಲಂಕಾರದ ಕಟೌಟ್‌ಗೆ ಆಧಾರವಾಗಿ ಕಂಬಗಳನ್ನು ಅಳವಡಿಸುವಾಗ ಕೇವಲ ಅರ್ಧ ಅಡಿ ಆಳದ ಹಳ್ಳ ತೆಗೆದು ಅಳವಡಿಸಲಾಗಿದ್ದು, ಒತ್ತಡ ತಾಳಲಾರದೆ ಕಟೌಟ್ ಮುರಿದು ಬಿದ್ದಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ. ಕಟೌಟ್ ಅಳವಡಿಸುವ ಸಂದರ್ಭದಲ್ಲಿ ಅದರ ಗಾತ್ರ, ತೂಕ, ಗಾಳಿಯ ಒತ್ತಡ ಹಾಗೂ ಕಂಬಗಳ ಭದ್ರತೆಯನ್ನು ಸಮರ್ಪಕವಾಗಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಕಟೌಟ್ ಕುಸಿದು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net