ದಸರೆಯಲ್ಲಿ ಕಲೆಯ ಹಬ್ಬ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಮೈಸೂರು: ಮೈಸೂರು ದಸರಾ ಎಂದರೆ ಅರಮನೆಯ ವೈಭವ, ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲ; ನಾಡಿನ ಕಲಾ ಪರಂಪರೆ, ಸೃಜನಶೀಲತೆ ಮತ್ತು ಕಲಾವಿದರ ಪ್ರತಿಭೆಯನ್ನು ಪರಿಚಯಿಸುವ ವೇದಿಕೆಯೂ ಹೌದು. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ನಗರದ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜು (ಕಾವಾ) ಕಲಾಸಕ್ತರಿಗೆ ವಿಭಿನ್ನ ಅನುಭವ ನೀಡಲು ಸಜ್ಜಾಗಿದೆ.

ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ವತಿಯಿಂದ ಅ.11ರಿಂದ ಅ.14ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಕಲಾ ಚಟುವಟಿಕೆಗಳು, ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು, ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಶೇಷವೆಂದರೆ ಇಲ್ಲಿ ಕಲಾಕೃತಿಗಳನ್ನು ವೀಕ್ಷಿಸುವ ಅವಕಾಶದ ಜತೆಗೆ ಕಲಾವಿದರು ಕಲೆಗಳನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ನೇರವಾಗಿ ನೋಡುವ ಅವಕಾಶವೂ ಕಲಾಸಕ್ತರಿಗೆ ದೊರೆಯಲಿದೆ.

ಅ.11 ರಂದು ಚಾಲನೆ:

ಅ.11ರಂದು ಸಂಜೆ 4.30ಕ್ಕೆ ಕಾವಾ ಆವರಣದಲ್ಲಿ ಲಲಿತಕಲೆ ಮತ್ತು ಕರಕುಶಲ ಕಲೆ ಕಾರ್ಯಕ್ರಮಗಳ ಉದ್ಘಾಟನೆ ಆಯೋಜಿಸ ಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ.

ಉದ್ಘಾಟನೆಯ ಬಳಿಕ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸ್ಯಾಂಡ್ ಕ್ಯಾಸ್ಟಿಂಗ್, ಕಾವಿಕಲೆ ಮತ್ತು ಅಚ್ಚುಕಲೆ ಶಿಬಿರಗಳಲ್ಲಿ ರಚನೆಯಾದ ಕಲಾಕೃತಿಗಳ ಅನಾವರಣ ಪ್ರಮುಖ ಆಕರ್ಷಣೆಯಾಗಲಿದೆ. ಶಿಬಿರಗಳಲ್ಲಿ ಕಲಾವಿದರು ರೂಪಿಸಿದ ಕಲಾಕೃತಿಗಳು ಸಾರ್ವಜನಿಕರ ಗಮನ ಸೆಳೆಯಲಿವೆ. ಇದರೊಂದಿಗೆ ರಾಜ್ಯಮಟ್ಟದ ಕಲಾವಿದರಿಂದ ಆಹ್ವಾನಿತ ಕಲಾಕೃತಿಗಳ ಪ್ರದರ್ಶನ, ರಾಷ್ಟ್ರ ಮತ್ತು ರಾಜ್ಯಮಟ್ಟದ ಕಲಾಕೃತಿಗಳ ಪ್ರದರ್ಶನ, ಕಲಾ ಪ್ರಾತ್ಯಕ್ಷಿಕೆ ಹಾಗೂ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಲಾತ್ಮಕ ಅನಿಮೇಷನ್ ಕಿರುಚಿತ್ರಗಳ ಪ್ರದರ್ಶನವೂ ಕಾರ್ಯಕ್ರಮದ ಮತ್ತೊಂದು ವಿಶೇಷತೆಯಾಗಲಿದೆ.

ಕಲೆ ರೂಪುಗೊಳ್ಳುವುದನ್ನು ವೀಕ್ಷಿಸಿ:

ಈ ನಾಲ್ಕು ದಿನಗಳ ಕಾರ್ಯಕ್ರಮದ ವಿಶೇಷತೆಯೆಂದರೆ ಕಲಾಕೃತಿಯನ್ನು ಸಿದ್ಧವಾದ ನಂತರ ನೋಡುವುದಕ್ಕಿಂತ, ಅದು ರೂಪುಗೊಳ್ಳುವ ಪ್ರಕ್ರಿಯೆಯನ್ನು ಕಣ್ಣಾರೆ ನೋಡುವ ಅವಕಾಶ. ಅ.11ರಿಂದ ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ವಿವಿಧ ಕಲಾಪ್ರಕಾರಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದರು ತಮ್ಮ ಕಲಾ ಕೌಶಲ್ಯವನ್ನು ನೇರವಾಗಿ ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರಿಗೆ ಕಲೆಯ ತಂತ್ರಗಳನ್ನು ಅರಿಯಲು ಇದು ಅವಕಾಶವಾಗಲಿದೆ. ಇದು ವಿಶೇಷವಾಗಿ ಕಲೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಯುವಜನರಿಗೆ ಕಲಾವಿದರ ಕೆಲಸದ ವಿಧಾನವನ್ನು ಹತ್ತಿರದಿಂದ ಗಮನಿಸುವ ವೇದಿಕೆಯಾಗಲಿದೆ.

ಮೊಬೈಲ್ ಪರದೆಯಿಂದ ಅನಿಮೇಷನ್ ಲೋಕಕ್ಕೆ

ಇಂದಿನ ತಲೆಮಾರಿನ ಮಕ್ಕಳ ಮತ್ತು ಯುವಜನರ ನಡುವೆ ಅನಿಮೇಷನ್‌ಗೆ ಹೆಚ್ಚಿನ ಆಸಕ್ತಿ ಇರುವ ಹಿನ್ನೆಲೆಯಲ್ಲಿ ಕಲಾತ್ಮಕ ಅನಿಮೇಷನ್ ಕಿರುಚಿತ್ರಗಳ ಪ್ರದರ್ಶನವೂ ಕಾರ್ಯಕ್ರಮದಲ್ಲಿ ಸ್ಥಾನ ಪಡೆದಿದೆ. ಅ.12ರಿಂದ 14ರವರೆಗೆ ಪ್ರತಿದಿನ ಮಧ್ಯಾಹ್ನ 12ರಿಂದ 1ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಅನಿಮೇಷನ್ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಚಿತ್ರಕಲೆ, ತಂತ್ರಜ್ಞಾನ ಮತ್ತು ಕಥನಶೈಲಿಯ ಸಂಯೋಜನೆಯಾಗಿರುವ ಅನಿಮೇಷನ್ ಕಲೆ ಯುವಜನರಿಗೆ ಹೊಸ ಸೃಜನಶೀಲ ಸಾಧ್ಯತೆಗಳನ್ನು ಪರಿಚಯಿಸಲಿದೆ.

ಮಕ್ಕಳ ಕಲ್ಪನೆಗೆ ಬಣ್ಣ, ಮಣ್ಣಿನ ರೂಪ

ದಸರಾ ಕಲಾ ಕಾರ್ಯಕ್ರಮವನ್ನು ಮಕ್ಕಳಿಗೂ ಹತ್ತಿರವಾಗಿಸುವ ನಿಟ್ಟಿನಲ್ಲಿ ಅ.13ರಂದು ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ 1ರಿಂದ 4ನೇ ಹಾಗೂ 9ರಿಂದ 12ನೇ ತರಗತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಅದೇ ಸಮಯದಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಜೇಡಿಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಕಾಗದದ ಮೇಲೆ ಬಣ್ಣಗಳ ಮೂಲಕ ಕಲ್ಪನೆಯನ್ನು ಮೂಡಿಸುವ ಮಕ್ಕಳ ಜತೆಗೆ, ಮಣ್ಣಿಗೆ ತಮ್ಮ ಕಲ್ಪನೆಯ ರೂಪ ನೀಡುವ ಮತ್ತೊಂದು ತಂಡದ ಮಕ್ಕಳು.. ಹೀಗೆ ಒಂದೇ ಆವರಣದಲ್ಲಿ ವಿಭಿನ್ನ ಕಲಾ ಮಾಧ್ಯಮಗಳೊಂದಿಗೆ ಮಕ್ಕಳು ತೊಡಗಿಸಿಕೊಳ್ಳಲಿದ್ದಾರೆ.

ಕಲಾವಿದರಿಗೆ ಗೌರವ, ಪ್ರತಿಭೆಗಳಿಗೆ ಪ್ರೋತ್ಸಾಹ

ಅ.14ರಂದು ಶಾಸಕ ತನ್ವೀರ್ ಸೇಠ್ ಅವರಿಂದ ವಿಜೇತರಿಗೆ ಗೌರವ ಸಮರ್ಪಣೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಮಕ್ಕಳು ಹಾಗೂ ಯುವ ಕಲಾವಿದರಿಗೆ ಸ್ಪರ್ಧೆಗಳ ಮೂಲಕ ವೇದಿಕೆ ಕಲ್ಪಿಸುವುದರ ಜತೆಗೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನವೂ ಈ ಕಾರ್ಯಕ್ರಮದ ಭಾಗವಾಗಿದೆ. ಕಾವಾದಲ್ಲಿ ನಡೆಯಲಿರುವ ಕಲಾ ಚಟುವಟಿಕೆಗಳು ಅ.14 ರಂದೇ ಅಂತ್ಯಗೊಳ್ಳುವುದಿಲ್ಲ. ಅ.18ರಂದು ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಕಾಲಾ ಜಾತ್ರೆ ನಡೆಯಲಿದೆ. ಇದರೊಂದಿಗೆ ಅ.11ರಿಂದ 14ರವರೆಗೆ ಪ್ರತಿದಿನ ಸಂಜೆ 4ರಿಂದ 6ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ದಸರಾ ಪ್ರವಾಸಕ್ಕೆ ಹೊಸ ಆಯಾಮ

ಮೈಸೂರು ದಸರಾಕ್ಕೆ ಬರುವ ಪ್ರವಾಸಿಗರು ಸಾಮಾನ್ಯವಾಗಿ ಅರಮನೆ, ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಕಾವಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಮೈಸೂರಿನ ದಸರಾ ಅನುಭವಕ್ಕೆ ಮತ್ತೊಂದು ಕಲಾತ್ಮಕ ಆಯಾಮವನ್ನು ಸೇರಿಸಲಿದೆ. ಕಲಾಕೃತಿಗಳ ಪ್ರದರ್ಶನದ ಜತೆಗೆ ಪ್ರಾತ್ಯಕ್ಷಿಕೆ, ಕಲಾ ಮಾರಾಟ, ಅನಿಮೇಷನ್ ಚಿತ್ರಗಳು, ಮಕ್ಕಳ ಸೃಜನಶೀಲ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಾಲಾ ಜಾತ್ರೆ...ಹೀಗೆ ಹಲವು ಚಟುವಟಿಕೆಗಳು ಒಂದೇ ವೇದಿಕೆಯಲ್ಲಿ ನಡೆಯಲಿವೆ. ಕಲೆ ನೋಡುವ ವಸ್ತುವಷ್ಟೇ ಅಲ್ಲ, ಅದನ್ನು ಸೃಷ್ಟಿಸುವ ಪ್ರಕ್ರಿಯೆಯೂ ಒಂದು ಅನುಭವ ಎಂಬ ಸಂದೇಶವನ್ನು ಕಾವಾದ ಈ ನಾಲ್ಕು ದಿನಗಳ ದಸರಾ ಕಲಾ ಸಂಭ್ರಮ ಸಾರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net