ಕಿಡಿಗೇಡಿ ಕೃತ್ಯಕ್ಕೆ ನಲುಗಿದ ಪುಸ್ತಕಮನೆ

Published on

ಲಕ್ಕೂರು: ಮಾಲೂರು ಕೈಗಾರಿಕಾ ಪ್ರದೇಶದ 4ನೇ ಹಂತದ ಕರ್ನಾಟಕ ಗೃಹ ನಿಮಾರ್ಣ ಮಂಡಳಿ ಬಡಾವಣೆಯಲ್ಲಿ ತಗಡಿನ ಮನೆಯಲ್ಲಿ ಒಂಟಿಯಾಗಿ ವಾಸವಿರುವ ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರ ಹರಿಹರಪ್ರಿಯ ಅವರ ಮನೆ ಕಿಡಿಗೇಡಿ ಕೃತ್ಯಕ್ಕೆ ನಲುಗಿದೆ. ಇದರೊಂದಿಗೆ, ಅದೆಷ್ಟೋ ದಿನಗಳಿಂದ ಒಂದಲ್ಲ ಒಂದು ಕಷ್ಟದಲ್ಲಿರುವ ಸಾಹಿತಿಯೊಬ್ಬರ ಬದುಕಿಗೆ ನೆರವು ನೀಡಲಾಗದ ದುಸ್ಥಿತಿ ನಮ್ಮ ಸರ್ಕಾರದ್ದಾಯಿತೇ ಎಂದು ಸಾಹಿತ್ಯ ಪ್ರಿಯರು ಮರುಗುವಂತಾಗಿದೆ.

ಹರಿಹರಪ್ರಿಯ ಅವರ ಸಾಹಿತ್ಯ ಭಂಡಾರದಲ್ಲಿ ಸುಮಾರು 5 ಲಕ್ಷ ಪುಸ್ತಕಗಳಿವೆ. ಮನೆಯಲ್ಲಿಯೇ ಗ್ರಂಥ ಶೇಖರಿಸಿ ಇಳಿವಯಸ್ಸಿನಲ್ಲಿ ಒಬ್ಬಂಟಿಯಾಗಿರುವ ಅವರಿಗೆ ಈಗಾಗಲೇ ಹೃದಯಾಘಾತವಾಗಿ 2 ಸ್ಟಂಟ್​ ಅಳವಡಿಸಲಾಗಿದೆ. ಆಗಾಗ ಔಷಧಗಳನ್ನು ತರುವುದಕ್ಕೆ ಅವರು ಮಾಲೂರಿಗೆ ಹೋಗಿ ಬರುತ್ತಾರೆ. ಭಾನುವಾರವೂ ಮಾಲೂರು ಪಟ್ಟಣಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯ ಮುಂದೆ ಯಾರೋ ದುಷ್ಕರ್ಮಿಗಳು ಮದ್ಯ ಸೇವಿಸಿ ಬಳಿಕ ಎಲ್ಲ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡು ಭಯಭೀತರಾಗಿರುವ ಹರಿಹರಪ್ರಿಯ ತಾಲೂಕು ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಔಷಧಕ್ಕಾಗಿ ಪುಸ್ತಕ ಮಾರುವ ದುಸ್ಥಿತಿ: ಹರಿಹರಪ್ರಿಯ ಅವರಿಗೆ ಇತ್ತೀಚೆಗೆ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ. ಸೂಕ್ತ ಚಿಕಿತ್ಸೆ ಪಡೆಯೋಣವೆಂದರೆ ಆರ್ಥಿಕ ಸಮಸ್ಯೆ ಅವರನ್ನು ಬಾಧಿಸುತ್ತಿದೆ. ತಾವು ಅತಿಯಾಗಿ ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಚೀಲದಲ್ಲಿ ತುಂಬಿಕೊಂಡು ಮಾರಾಟ ಮಾಡಲು ತಾಲೂಕಿನ ಊರೂರು ಅಲೆಯುವ ಪಾಡು ಅವರಿಗೆ ಒದಗಿಬಂದಿದೆ. ಯಾರಾದರೂ ಒಂದೆರಡು ಪುಸ್ತಕ ಕೊಂಡಲ್ಲಿ ಮಾತ್ರ ನಿತ್ಯದ ಔಷಧಗಳ ಖರ್ಚು ಹಾಗೂ ಅಂದಿನ ಊಟ ಎಂಬ ಸ್ಥಿತಿ ಇದೆ. ಪರಿಸ್ಥಿತಿಯ ಅರಿವಿದ್ದೂ ಈ ಹಿರಿಯ ಸಾಹಿತಿಯ ನೆರವಿಗೆ ಸರ್ಕಾರವಾಗಲೀ, ನಾಡು &ನುಡಿಯ ಕುರಿತು ವೇದಿಕೆಯಲ್ಲಿ ಅಭಿಮಾನ ಪ್ರದರ್ಶಿಸುವ ರಾಜಕೀಯ ಪಕ್ಷಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದಾಗದಿರುವುದು ನಾಡಿನ ನೇತಾರರಲ್ಲಿ ಜ್ಞಾನದ ಕುರಿತಾಗಿ ಇರುವ ಅಸಡ್ಡೆಯನ್ನು ಹೇಳುತ್ತಿದೆ.

ಪುಸ್ತಕ ಮನೆ ಹಾಗೂ ನನ್ನ ಜೀವನಕ್ಕೆ ನೆರವು ಬೇಕಿದೆ. ಯಾವ ಇಲಾಖೆ ಅಧಿಕಾರಿಯೂ 3 ವರ್ಷಗಳಿಂದ ತಿರುಗಿಯೂ ನೋಡದೆ ಅನಾಥವಾಗಿದ್ದೇನೆ. ಆಗಾಗ ಪತ್ರಿಕೆಗಳಲ್ಲಿ ನನ್ನ ಬಗ್ಗೆ ಸುದ್ದಿ ಬಂದರೆ ಕಾಟಾಚಾರಕ್ಕೆ ಕಿರಿಯ ಅಧಿಕಾರಿಗಳು ಬಂದು ಭೇಟಿಯಾಗಿ ನಾವಿದ್ದೇವೆ ಎಂದು ಹೇಳುತ್ತಾರೆ ವಿನಃ, ಯಾವುದೇ ಸಹಕಾರ ನೀಡಿಲ್ಲ. | ಹರಿಹರಪ್ರಿಯ ಹಿರಿಯ ಸಾಹಿತಿ

ಮೂಲೆಗುಂಪಾದ ಮನವಿ: ಕನ್ನಡ ಹೋರಾಟಗಾರ ಹರಿಹರಪ್ರಿಯ ಅವರ ಆಸ್ಪತ್ರೆ ಖರ್ಚುವೆಚ್ಚ ಹಾಗೂ ಸೂಕ್ತ ಮನೆ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕೋಲಾರ ಜಿಲ್ಲಾಡಳಿತ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒಂದು ವರ್ಷವಾದರೂ ಕಡತವನ್ನು ಮುಖ್ಯಮಂತ್ರಿ ಕಚೇರಿಯಲ್ಲಿಯೇ ಮೂಲೆಗುಂಪು ಮಾಡಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net