ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ

07 yelandur 01
Published on

ಚಾಮರಾಜನಗರ: 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಅಂತ್ಯದೊಳಗೆ ಪಾವತಿ ಮಾಡಿದ್ದಲ್ಲಿ ಶೇ.5 ರಷ್ಟು ರಿಯಾಯತಿ ಲಭಿಸಲಿದ್ದು, ಯಳಂದೂರು ಪಟ್ಟಣದ ನಾಗರಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮನವಿ ಮಾಡಿದರು.


ಪಟ್ಟಣ ಪಂಚಾಯಿತಿ ವತಿಯಿಂದ ಶನಿವಾರ ತೆರಿಗೆ ಹಾಗೂ ಮತದಾನ ಜಾಗೃತಿ ಮೂಡಿಸುವ ಕರಪತ್ರಗಳನ್ನು ಮನೆಮನೆಗಳಿಗೆ ಹಂಚುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಪಟ್ಟಣದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವ ಸಾರ್ವಜನಿಕರು ಏಪ್ರಿಲ್ ಅಂತ್ಯದೊಳಗೆ ತಮ್ಮ ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ್ದಲ್ಲಿ ಒಟ್ಟು ತೆರಿಗೆಯಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಇದರೊಂದಿಗೆ ನೀರಿನ ಶುಲ್ಕ, ಉದ್ದಿಮೆ ಪರವಾನಗಿ ನವೀಕರಣ ಶುಲ್ಕವನ್ನು ಪಾವತಿಸುವ ಮೂಲಕ ಪಂಚಾಯಿತಿಯೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ತಪ್ಪದೆ ಮತದಾನ ಮಾಡಿ: ಕರಪತ್ರದ ಮತ್ತೊಂದು ಬದಿಯಲ್ಲಿ ನಾವು ಮತದಾನ ಜಾಗೃತಿಯ ಬಗ್ಗೆ ಮಾಹಿತಿಯನ್ನು ಮುದ್ರಿಸಿ ಹಂಚುತ್ತಿದ್ದೇವೆ.

ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಡಬೇಕು, ಇದು ಮೂಲಭೂತ ಹಕ್ಕಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗಬಾರದು. ಮತ್ತೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಪಂನ ಮಲ್ಲಿಕಾರ್ಜುನ, ಜಯಲಕ್ಷ್ಮೀ, ವಿಜಯ, ಲಕ್ಷ್ಮೀ, ರೇಖಾ, ಜಗದೀಶ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net