

ಬೆಂಗಳೂರು: ಬಿಡಿಎ ಬಡಾವಣೆಗಳಲ್ಲಿನ ಮೂಲೆ ನಿವೇಶನಗಳ ನಾಲ್ಕನೇ ಹಂತದ ಇ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 445 ನಿವೇಶನಗಳ ಪೈಕಿ 332 ನಿವೇಶನಗಳು ಹರಾಜಾಗಿವೆ.
ಬಿಡಿಎ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳಲ್ಲಿ ಇ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ಅದರಂತೆ ಅ. 12ರಿಂದ ಆರಂಭವಾಗಿದ್ದ ನಾಲ್ಕನೇ ಹಂತದ ಹರಾಜು ಪ್ರಕ್ರಿಯೆಯ ಬಿಡ್ಡಿಂಗ್ ಸೋಮವಾರ ಮುಕ್ತಾಯಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಬನಶಂಕರಿ, ಸರ್ ಎಂ.ವಿಶ್ವೇಶ್ವರಯ್ಯ, ಜೆ.ಪಿ.ನಗರ, ಅರ್ಕಾವತಿ ಬಡಾವಣೆ, ಬಿಟಿಎಂ ಬಡಾವಣೆಗಳಲ್ಲಿನ 448 ನಿವೇಶನಗಳು ಹರಾಜಿಗೊಳಪಟ್ಟಿದ್ದವು. ಅದರಲ್ಲಿ 448 ನಿವೇಶನಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಅದರಲ್ಲಿ 3 ನಿವೇಶನಗಳನ್ನು ಆರಂಭದಲ್ಲಿಯೇ ಹಿಂಪಡೆಯಲಾಗಿತ್ತು. ಅಂತಿಮವಾಗಿ 445 ನಿವೇಶನಗಳ ಹರಾಜು ಮಾಡಲಾಗಿದ್ದು, 99 ನಿವೇಶನಗಳಿಗೆ ಯಾವುದೇ ಬಿಡ್ ಸಲ್ಲಿಕೆಯಾಗಿಲ್ಲ. ಉಳಿದ 332 ನಿವೇಶನಗಳು ಹರಾಜಾಗಿವೆ.
109 ಕೋಟಿ ರೂ. ಆದಾಯ: 4ನೇ ಹಂತದ ಇ ಹರಾಜು ಪ್ರಕ್ರಿಯೆಯಲ್ಲಿ ಬಿಡಿಎ ಭರ್ಜರಿ ಆದಾಯಗಳಿಸಿದೆ. ಹಾರಾಜು ಪ್ರಕ್ರಿಯೆಯಲ್ಲಿ 1,790 ಬಿಡ್ಡುದಾರರು ಭಾಗವಹಿಸಿ ನಿವೇಶನಗಳಲ್ಲಿ ಖರೀದಿಸಿದ್ದಾರೆ. ಮಾರಾಟವಾದ ನಿವೇಶಗಳ ಮೂಲಬೆಲೆಯನ್ನು 171.95 ಕೋಟಿ ರೂ.ಗೆ ನಿಗದಿ ಮಾಡಲಾಗಿತ್ತು. ಆದರೆ, ಬಿಡ್ಡುದಾರರು 281.32 ಕೋಟಿ ರೂ. ಬಿಡ್ ಸಲ್ಲಿಸಿ, ನಿವೇಶನಗಳನ್ನು ಪಡೆದಿದ್ದಾರೆ. ಒಟ್ಟಾರೆ 109.37 ಕೋಟಿ ರೂ. ಹೆಚ್ಚುವರಿ ಆದಾಯ ಬಂದಂತಾಗಿದೆ.