

ಬೆಂಗಳೂರು: ಮಹಿಳಾ ಸಬಲೀಕರಣ ಹಾಗೂ ನೇತೃತ್ವವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಹೆಣ್ಣುಮಕ್ಕಳ ಯೋಜನೆಗಳಿಗಾಗಿ 3 ಲಕ್ಷ ಕೋಟಿ ಅಧಿಕ ಅನುಧಾನ ಘೋಷಿಸಿದೆ.
ಲೋಕಸಭೆಯಲ್ಲಿ ಮಂಗಳವಾರ 2024-25ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.
ಮಧ್ಯಂತರ ಬಜೆಟ್‌ನಲ್ಲಿ ಉಲ್ಲೇಖಿಸಿರುವಂತೆ ಬಡವರು, ಮಹಿಳೆಯರು, ಯುವಜನರು ಹಾಗೂ ರೈತರ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದ ಅವರು, ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಉತ್ತೇಜಿಸಲು ಮಹಿಳಾ ಹಾಸ್ಟೆಲ್‌ಗಳ ಸ್ಥಾಪನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೈಗಾರಿಕೆಗಳ ಸಹಯೋಗದಲ್ಲಿ ಉದ್ಯೋಗಿ ಮಹಿಳಾ ಹಾಸ್ಟೆಲ್ ಮತ್ತು ಶಿಶುವಿಹಾರಗಳನ್ನು ಸ್ಥಾಪಿಸಲಾಗುವುದು. ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳಾ ಸ್ವಸಹಾಯ ಗುಂಪುಗಳು ಉದ್ಯಮಗಳ ಮಾರುಕಟ್ಟೆ ಪ್ರವೇಶಿಸಲು ಪಾಲುದಾರಿಕೆಗೆ ಅವಕಾಶ ಕಲ್ಪಿಸುವ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ಆಸ್ತಿಗಳಿಗೆ ಸುಂಕ ಇಳಿಕೆ: ಮಹಿಳೆಯರು ಖರೀದಿಸುವ ಆಸ್ತಿಗಳ ಮೇಲಿನ ಸುಂಕವನ್ನು ಮತ್ತಷ್ಟು ಇಳಿಕೆ ಮಾಡಲಾಗುವುದು ಎಂದ ಅವರು, ತೆರಿಗೆ ಉದ್ದೇಶಗಳಿಗೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆ ಬದಲಿಗೆ ಆಧಾರ್ ನೋಂದಣಿ ಐಡಿ ಉಲ್ಲೇಖಿಸುವ ಬಗ್ಗೆ ಪ್ರಸ್ತಾಪಿಸಿದರು. ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ (ಮುದ್ರಾಂಕ ಶುಲ್ಕ) ವಿಧಿಸುವುದನ್ನು ಮುಂದುವರಿಸುವ ರಾಜ್ಯಗಳಿಗೆ ದರಗಳನ್ನು ಮಿತಗೊಳಿಸಲು ಪ್ರೋತ್ಸಾಹ ನೀಡಲಿದ್ದು, ಮಹಿಳೆಯರು ಖರೀದಿಸುವ ಆಸ್ತಿಗಳಿಗೆ ಸುಂಕವನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು. ಈ ಸುಧಾರಣೆ ನಗರಾಭಿವೃದ್ಧಿ ಯೋಜನೆಗಳ ಅಗತ್ಯ ಅಂಶವನ್ನಾಗಿಸುವುದಾಗಿ ಹೇಳಿದರು.