ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಳೆದ 2-3 ದಿನಗಳಲ್ಲಿ ಅಪರಾಧ ಹಿನ್ನೆಲೆಯುಳ್ಳ 22 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲ ಸಂಘಟಿತ ಅಪರಾಧ, ಎನ್ಡಿಪಿಎಸ್ ಪ್ರಕರಣ ಮತ್ತು ಇನ್ನಿತರ ಅಪರಾಧಗಳಲ್ಲಿ ತೊಡಗಿದ್ದವರಾಗಿದ್ದಾರೆ. ಕಲಬುರಗಿ, ಬಳ್ಳಾರಿ, ಮೈಸೂರು, ಮಂಗಳೂರು, ಬೆಳಗಾವಿ, ಬೆಂಗಳೂರು ದಾವಣಗೆರೆ ನಗರ ಮತ್ತು ಜಿಲ್ಲೆಯ ನಿರ್ದಿಷ್ಟ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಪದೇ ಪದೆ ಅಪರಾಧ ಕೃತ್ಯಗಳನ್ನು ನಡೆಸುವವರನ್ನು ಗಡಿಪಾರು ಮಾಡಲಾಗುತ್ತದೆ. ಗಡಿಪಾರು ಆದೇಶ 6 ತಿಂಗಳು ಕಾಲ ಜಾರಿಯಲ್ಲಿ ಇರುತ್ತದೆ. ಈ ಆದೇಶ ಉಲ್ಲಂಘಿಸಿದರೆ ಮುಂದಿನ ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದರು.
ಬೆಂಡಿಗೇರಿ ಹಾಗೂ ಕಸಾಬಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ತಲಾ ನಾಲ್ವರು, ಹಳೇ ಹುಬ್ಬಳ್ಳಿ ಮೂವರು, ಧಾರವಾಡ ಶಹರ, ಹುಬ್ಬಳ್ಳಿ ಉಪ ನಗರ ತಲಾ ಇಬ್ಬರು, ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಎಪಿಎಂಸಿ, ಕೇಶ್ವಾಪುರ, ಕಮರಿಪೇಟ, ಅಶೋಕನಗರ, ವಿದ್ಯಾನಗರ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ತಲಾ ಒಬ್ಬರನ್ನು ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಗುರುವಾರ ರೌಡಿ ಪರೇಡ್ ನಡೆಸಲಾಗಿತ್ತು. ಆಗ ಶೇ. 75 ರಷ್ಟು ರೌಡಿಗಳು ಹಾಜರಾಗಿದ್ದರು. ಗಣೇಶೋತ್ಸವ ಹಾಗೂ ಈದ್ ಮಿಲಾದ್ ಸಂದರ್ಭದಲ್ಲಿ ಯಾವುದೇ ಸಮಾಜಘಾತುಕ ಕೃತ್ಯಗಳನ್ನು ನಡೆಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟು 105 ಗಡಿಪಾರು
2025ರಲ್ಲಿ ಇಲ್ಲಿಯವರೆಗೆ ಅಪರಾಧ ಹಿನ್ನೆಲೆಯುಳ್ಳ 105 ಜನರನ್ನು ಗಡಿಪಾರು ಮಾಡಿದ್ದೇವೆ. ಮೊದಲ ಹಂತದಲ್ಲಿ 52 ಜನ, ಎರಡನೇ ಹಂತದಲ್ಲಿ 31 ಹಾಗೂ ಮೂರನೇ ಹಂತದಲ್ಲಿ 22 ಜನರನ್ನು ಗಡಿಪಾರು ಮಾಡಲಾಗಿರುತ್ತದೆ. 2023ರಲ್ಲಿ 24 ಹಾಗೂ 2024ರಲ್ಲಿ 23 ಜನರನ್ನು ಗಡಿಪಾರು ಮಾಡಲಾಗಿತ್ತು.
ಡಿಸಿಪಿ ಗಳಾದ ರವೀಶ ಸಿ.ಆರ್., ಮಹಾನಂದ ನಂದಗಾವಿ, ಇತರರು ಇದ್ದರು.