

ಕಾಗವಾಡ: ಪ್ರಸಕ್ತ ಹಂಗಾಮಿಗೆ ೧೨ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕು. ಪ್ರತಿ ವರ್ಷದಂತೆ ಕಬ್ಬಿಗೆ ಯೋಗ್ಯ ಬೆಲೆ ನೀಡಲಾಗುವುದು ಎಂದು ಶಿರಗುಪ್ಪಿ ಶುಗರ್ಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ರಮೇಶ ದೊಡ್ಡಣ್ಣವರ ತಿಳಿಸಿದ್ದಾರೆ.
ಶಿರಗುಪ್ಪಿ ಶುಗರ್ಸ್ ಕಾರ್ಖಾನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶಾನುಸಾರ ಅ.೨೦ರಿಂದ ಕಬ್ಬು ನುರಿಸುವ ಹಂಗಾಮು ಆರಂಭಿಸಲಾಗುತ್ತಿದೆ. ಕಳೆದ ವರ್ಷ ರೈತರಿಗೆ ಉತ್ತಮ ಬೆಲೆ ನೀಡುವ ಜತೆಗೆ ಕಬ್ಬು ಪೂರೈಸಿದ ೧೫ ದಿನಗಳ ಒಳಗಾಗಿ ಬಿಲ್ ಪಾವತಿಸಿ ರೈತರ ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ. ಈ ವರ್ಷವೂ ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ರೈತರು ಕಾರ್ಖಾನೆಗಳ ವಿರುದ್ಧ ಹೋರಾಡುವ ಬದಲು ಸರ್ಕಾರದ ವಿರುದ್ಧ ಹೋರಾಟ ಮಾಡಿ, ತಮ್ಮ ಸಂಕಷ್ಟ ಮನವರಿಕೆ ಮಾಡಿದರೆ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಮತ್ತು ಕಾರ್ಖಾನೆಗಳ ಆರ್ಥಿಕ ಹೊರೆ ನೀಗಿಬಹುದಾಗಿದೆ. ಸರ್ಕಾರದ ಧೋರಣೆಗಳು ಸ್ಥಿರವಾಗಿರದ ಕಾರಣ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದ್ದು, ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಸೂಕ್ತ ನೀತಿಗಳನ್ನು ರೂಪಿಸಬೇಕು ಎಂದರು.
ಕಾರ್ಖಾನೆಯ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ಮಾತನಾಡಿ, ನಮ್ಮ ಕಾರ್ಖಾನೆ ಅನೇಕ ವರ್ಷಗಳಿಂದ ಕಬ್ಬಿಗೆ ಯೋಗ್ಯ ಬೆಲೆ ನೀಡುತ್ತ ರೈತರ ಏಳಿಗೆಗೆ ಸಹಕಾರಿಯಾಗಿದೆ. ಆದರೆ, ಇದನ್ನು ಸಹಿಸದ ಕೆಲವರು ಕಾರ್ಖಾನೆಗಳ ವಿರುದ್ಧ ವದಂತಿ ಹಬ್ಬಿಸಿ, ಹೆಸರು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದೆ ರೈತರು ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಖಾನೆ ಮುಖ್ಯ ವ್ಯವಸ್ಥಾಪಕ ಅರುಣ ಫರಾಂಡೆ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ ೪೨ ರೂ., ಲೀಟರ್ ಎಥೆನಾಲ್‌ಗೆ ೭೦ ರೂ. ಮತ್ತು ಪ್ರತಿ ಯೂನಿಟ್ ವಿದ್ಯುತ್‌ಗೆ ರೂ. ೬ ರಿಂದ ೮ ರೂ. ನಿಗದಿ ಮಾಡಿದರೆ ಕಾರ್ಖಾನೆಗಳು ಆರ್ಥಿಕ ಸಂಕಷ್ಟದಿಂದ ಮುಕ್ತವಾಗಿ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡಲು ಸಾಧ್ಯವಾಗಲಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು. ಪೃಥ್ವಿ ದೊಡ್ಡಣ್ಣವರ, ಕಾರ್ಖಾನೆ ಮಾನವ ಸಂಪನ್ಮೂಲ ಅಧಿಕಾರಿ ರವೀಂದ್ರ ಜಾಡರ, ಕೃಷಿ ಅಧಿಕಾರಿ ಮಹಾವೀರ ಬಿರನಾಳೆ ಇತರರಿದ್ದರು.