More

    ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ: ಡಿಸಿ ನಲಿನ್​ ಅತುಲ್​ ಸೂಚನೆ

    ಕೊಪ್ಪಳ: ನಗರ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಸಫಾಯಿ ಕರ್ಮಚಾರಿಗಳಿಗೆ ನಿಯಮಾನುಸಾರ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್​ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಕೈಗವಸು, ಮುಖಗವಸು, ಬೂಟ್​, ಸಮವಸ್ತ್ರ ಸೇರಿ ಇತರ ಮೂಲ ಸೌಲಭ್ಯ ಒದಗಿಸಿ. ಬೆಳಗಿನ ತಿಂಡಿ ಕೊಡಿ. ಕಾಲ ಕಾಲಕ್ಕೆ ಆರೋಗ್ಯ ಶಿಬಿರ ನಡೆಸಿ. ವೈದ್ಯಕಿಯ ವೆಚ್ಚ ಮರು ಪಾವತಿ, ಮರು ಪಾವತಿಗೆ ಕ್ರಮವಹಿಸಿ. ಜಿಲ್ಲೆಯ ಯಾವುದೇ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುವಲ್​ ಸ್ಕಾವೆಂಜಿಂಗ್​ ನಡೆಯಬಾರದು. ನಡೆದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಕ್ಕಿಂಗ್​, ಜಟ್ಟಿಂಗ್​ ಯಂತ್ರಗಳನ್ನು ಇರುವಂತೆ ನೋಡಿಕೊಳ್ಳಿ. ಇಲ್ಲದಿರುವೆಡೆ ತಕ್ಷಣ ಖರೀದಿಸಿ. ಮ್ಯಾನುವಲ್​ ಸ್ಕ್ಯಾವೆಂಜರ್​ ಪದ್ಧತಿ ನಿಷೇಧ ಬಗ್ಗೆ ಜಾಗೃತಿ ಮೂಡಿಸಿ. ಸಕಾಲಕ್ಕೆ ವೇತನ ಪಾವತಿಸಿ. ನಿವೇಶನ ಹಂಚಿಕೆ ಬಗ್ಗೆಯೂ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಮಾತನಾಡಿ, ಕೊಪ್ಪಳ ಹಾಗೂ ಗಂಗಾವತಿ ನಗರಸಭೆ, ಕುಷ್ಟಗಿ ಹಾಗೂ ಕಾರಟಗಿ ಪುರಸಭೆ ಮತ್ತು ಯಲಬುರ್ಗಾ ಹಾಗೂ ಕುಕನೂರು ಪಟ್ಟಣ ಪಂಚಾಯತಿಗಳಲ್ಲಿ ಅಗತ್ಯಕ್ಕನುಸಾರ ಸಕ್ಕಿಂಗ್​ ಮಷಿನ್​ ಖರೀದಿಸಲಾಗಿದೆ.

    ಕೆಲವೆಡೆ ಖಾಸಗಿ ಮಷೀನ್​ಗಳಮೂಲಕ ಸೆಫ್ಟಿಕ್​ ಟ್ಯಾಂಕ್​ ಕ್ಲೀನ್​ ಮಾಡಿಸಲಾಗುತ್ತಿದೆ. ಎಲ್ಲ ಪೌರ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಗುರುತಿನ ಚೀಟಿ ಒದಗಿಸಿದ್ದೇವೆ. ಸಮವಸ್ತ್ರ, ಸುರಾ ಕಿಟ್​ ನೀಡಲಾಗಿದೆ ಎಂದರು.

    ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ, ಕುಷ್ಟಗಿ ತಹಸೀಲ್ದಾರ್​ ಶೃತಿ, ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯರಾದ ರಗಡಪ್ಪ ಹುಲಿಹೈದರ್​, ಕಾಶಪ್ಪ ಚಲವಾದಿ ಇತರರಿದ್ದರು.

    ಮನೆ ಮಂಜೂರು: ಕೊಪ್ಪಳ ನಗರಸಭೆಯ 49 ಕಾಯಂ ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಮಂಜೂರಾಗಿದೆ. ಕನಿಷ್ಠ ವೇತನ ಹಾಗೂ ನೇರ ಪಾವತಿ ಪೌರಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ಗಂಗಾವತಿ ನಗರಸಭೆ ವ್ಯಾಪ್ತಿಯ ಸರ್ವೇ ನಂ.56 ರಲ್ಲಿ 4 ಎಕರೆ 29 ಗುಂಟೆ ಜಮೀನು ಪೌರಕಾರ್ಮಿಕರಿಗೆ ಕಾಯ್ದಿರಿಸಲಾಗಿದೆ. 64 ಕಾಯಂ ಪೌರಕಾರ್ಮಿಕರು ಹಾಗೂ 23 ಹಂಗಾಮಿ ಪೌರಕಾರ್ಮಿಕರಿಗೆ ನಿವೇಶನ ಹಂಚಿದ್ದೇವೆ. ಇವರಲ್ಲಿ 64 ಪೌರ ಕಾರ್ಮಿಕರು ಗೃಹ ಭಾಗ್ಯ ಯೋಜನೆಗೆ ಆಯ್ಕೆಯಾಗಿದ್ದಾರೆಂದು ಕಾವ್ಯಾರಾಣಿ ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts