More

    ಕರುನಾಡು ಸೇರಲಿ ಕನ್ನಡದ ಊರುಗಳು

    ಚನ್ನಗಿರಿ: ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಸುಪರ್ದಿಯಲ್ಲಿರುವ ಅಚ್ಚಗನ್ನಡ ಪ್ರದೇಶಗಳು ಕನ್ನಡನಾಡಿಗೆ ಸೇರಿದಾಗ ಮಾತ್ರ ಸಮ ಕರ್ನಾಟಕ ಆಗಲಿದೆ ಎಂದು ಸಮ್ಮೇಳನಾಧ್ಯಕ್ಷ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಆಶಿಸಿದರು.

    ತಾಲೂಕಿನ ಹರನಹಳ್ಳಿ-ಕೆಂಗಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
    ಆದವಾನಿ, ಆಲೂರು, ರಾಯದುರ್ಗ, ಮಡಕಶಿರಾ, ಸೊಲ್ಲಾಪುರ, ಅಕ್ಕಲಕೋಟೆ, ಕೃಷ್ಣಗಿರಿ, ಕೂನೂರು, ಹೊಸೂರು, ಕಾಸರಗೋಡು, ವಯನಾಡು ಮೊದಲಾದವು ಕನ್ನಡದ ಊರುಗಳು. ಇವು ಮರಳಿ ಕರುನಾಡು ಸೇರಬೇಕಿವೆ ಎಂದರು.

    ಸಾಮ್ರಾಜ್ಯಗಳ ತಾಣದಿಂದ ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಕ್ಷಯನಿಧಿಯಾದ ಕನ್ನಡನಾಡಿಗೆ ಅನನ್ಯ ಇತಿಹಾಸ-ಪರಂಪರೆ ಇದೆ. ಅನೇಕ ರಾಜ ಮನೆತನಗಳು ಆಳ್ವಿಕೆಯಿಂದ ನಾಡನ್ನು ಬೆಳಗಿಸಿವೆ ಎಂದ ಅವರು ಜಿಲ್ಲೆಯ ವಿಶೇಷತೆಗಳ ಬಗ್ಗೆ ಮೆಲುಕು ಹಾಕಿದರು.

    ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಮಾತನಾಡಿ, ಪತ್ರಿಕೆ-ಮಾಧ್ಯಮಗಳಲ್ಲಿ ನಿತ್ಯ ಮನಸ್ಸಿಗೆ ಬೇಸರ ತರುವ ಸುದ್ದಿ ಪ್ರಕಟಿಸುವ ಬದಲಿಗೆ ಕನ್ನಡ ಭಾಷೆ ಉಳಿಸಿ, ಮನಸ್ಸಿನಲ್ಲಿ ನಿಲ್ಲುವಂಥ ಬರವಣಿಗೆಗಳನ್ನು ಪ್ರಕಟಿಸಬೇಕು ಎಂದು ಹೇಳಿದರು.

    ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸದಿರುವ ಕಾರಣಕ್ಕೆ ಮುಚ್ಚುವ ಸ್ಥಿತಿ ತಲುಪಿದೆ. ಆದ್ದರಿಂದ ಇಂಗ್ಲೀಷ್ ವ್ಯಾಮೋಹ ಮರೆತು ಕಡ್ಡಾಯವಾಗಿ ಕನ್ನಡ ಕಲಿಸಿ ಎಂದು ಮನವಿ ಮಾಡಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ದಾವಣಗೆರೆಯಲ್ಲಿ 3ನೇ ವಿಶ್ವ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡಿಗರಾದ ನಾವುಗಳು ಸಂಘಟಿತರಾಗಿ ಹಬ್ಬದ ರೀತಿ ನಡೆಸಬೇಕು ಎಂದರು.

    ಸಮ್ಮೇಳನದಲ್ಲಿ ಜ್ಞಾನಗಂಗೆ ಸ್ಮರಣ ಸಂಚಿಕೆ ಪುಸ್ತಕ ಬಿಡುಗಡೆ ಮಾಡಲಾಯಿತು. ತಾಲೂಕು ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಇತರರಿದ್ದರು. ಗ್ರಾಪಂ ಅಧ್ಯಕ್ಷೆ ದಾನಿಬಾಯಿ ಕನ್ನಡ ಧ್ವಜಾರೋಹಣ ಮಾಡಿದರು.
    ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರನ್ನು ಕೂರಿಸಿದ ಬೆಳ್ಳಿರಥ ಮೆರವಣಿಗೆ, ರಾಜಬೀದಿಗಳ ಮೂಲಕ ರಾಮಲಿಂಗೇಶ್ವರ ಮಠದವರೆಗೆ ಅದ್ದೂರಿಯಾಗಿ ನಡೆಯಿತು. ಡೊಳ್ಳು ಕುಣಿತ, ಬೊಂಬೆ ಮೇಳ, ಯಕ್ಷಗಾನ, ಜಾನಪದ ಕಲಾತಂಡಗಳು ಮೆರುಗು ನೀಡಿದವು. ಬಿ. ವಾಮದೇವಪ್ಪ, ಕೇಂದ್ರ ಕಸಾಪ ಸಂಘಟನಾ ಕಾರ್ಯದರ್ಶಿ ಬಿ.ರುದ್ರಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts