

ಬೆಂಗಳೂರು: ಅಂಗವಿಕಲರು ಬೇರೆಲ್ಲರಂತೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು, ಸಮಾಜಕ್ಕೆ ಎಂದಿಗೂ ಹೊರೆಯಲ್ಲ; ಅವರು ಕೂಡಾ ಸಮಾಜದ ಆಸ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೊಂದು ಕಾಲಕ್ಕೆ ಅಂಗವಿಕಲ ಮಕ್ಕಳು ಜನಿಸಿದರೆ ದೊಡ್ಡಹೊರೆ ಎಂಬ ಭಾವನೆ ಇತ್ತು. ಆದರೆ ಈಗ ವಿಕಲಚೇತನರು ತಮಗಿರುವ ವಿಶೇಷ ಶಕ್ತಿಯಿಂದ ಸಾಧನೆ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಬಜೆಟ್‌ನಲ್ಲಿ ಇಲಾಖೆಗೆ ನೀಡಿರುವ ಅನುದಾನ ಕಡಿಮೆಯಾಗಿದೆ ಎಂಬ ದೂರು ಕೇಳಿ ಬಂದಿದೆ. ಮುಂದಿನ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಉಳಿದ 44 ಕೋಟಿ ರೂಪಾಯಿ ಅನುದಾನವನ್ನು ಇಲಾಖೆಗೆ ಒದಗಿಸಿಕೊಡಲಾಗುವುದು. ಈಗಾಗಲೇ 7 ಜಿಲ್ಲೆಗಳಲ್ಲಿ 13 ಬುದ್ದಿಮಾಂಧ್ಯ ಮಕ್ಕಳ ಶಾಲೆ ತೆರೆಯುವ ೋಷಣೆ ಮಾಡಲಾಗಿದ್ದು, ಅದರಲ್ಲಿ ನಾಲ್ಕು ಶಾಲೆಗಳನ್ನು ಈಗಾಗಲೇ ತೆರೆಯಲಾಗಿದೆ. ಅಂಗವಿಕಲರ ಮರಣ ಪರಿಹಾರವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗದಲ್ಲಿ ಅಂಗವಿಕಲರ ಮೀಸಲಾತಿಗಾಗಿ ಸಮಿತಿಯನ್ನು ರಚಿಸಲಾಗಿದೆ. ಎಲ್ಲ ಅಂಗವಿಕಲರಿಗೆ ಅಗತ್ಯವಿರುವ ವಾಹನಗಳ ವಿತರಣೆಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಸಿದ್ದರಾಮಯ್ಯ ವಿವರಿಸಿದರು. ಕೇಂದ್ರ ಸರ್ಕಾರ ನೀಡುತ್ತಿರುವ ಅಂಗವಿಕಲರ ಮಾಸಾಶನ 500 ರೂಪಾಯಿಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಇದೇ ವೇಳೆ ಸಿಎಂ ಹೇಳಿದರು. ಸಮಾರಂಭದಲ್ಲಿ ಅಂಗವಿಕಲ ಸಾಧಕರಿಗೆ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಘಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಾದೇಶಿಕ ಸಲಹೆಗಾರ್ತಿ ಡಾ.ಇಂದುಮತಿ ರಾವ್, ಇಲಾಖೆಯ ಹಿರಿಯ ಅಧಿಕಾರಿಗಳಾದ ಟಿ.ರಾಘವೇಂದ್ರ, ದಾಸ್ ಸೂರ್ಯವಂಶಿ, ಎನ್.ಸಿದ್ದೇಶ್ವರ ಮತ್ತಿತರರಿದ್ದರು.
ದೇಶದಲ್ಲೇ ಮೊದಲ ಬಾರಿಗೆ ಅಂಗವಿಕಲರನ್ನು ಆರೈಕೆಮಾಡುವವರಿಗೆ ತಿಂಗಳಿಗೆ ಒಂದು ಸಾವಿರ ಭತ್ಯೆ ನೀಡುವ ಮಹತ್ವದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅಂಗವಿಕಲ ಮಗುವನ್ನು ಹುಟ್ಟಿನಿಂದ ಕೊನೆಯವರೆಗೆ ಆರೈಕೆ ಮಾಡುವ ಸಂಬಂಧಿಗಳ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತಹ ಆರೈಕೆದಾರರ ದಿನಾಚರಣೆಯನ್ನು ಕೂಡಾ ವಿಕಲಚೇತನರ ದಿನಾಚರಣೆ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ. ಆರೈಕೆದಾರರಿಗೆ ಮಾಸಿಕ ಒಂದು ಸಾವಿರ ರೂ. ಭತ್ಯೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನೂತನ ಯೋಜನೆ ಇಡೀ ದೇಶಕ್ಕೆ ಮಾದರಿ ಎಂದರು.