More

    30ರಂದು ಪಿಯು ಕಾಲೇಜು ಪ್ರಾರಂಭ: ಪರಿಸ್ಥಿತಿ ಸುಧಾರಿಸಿದರೆ ಎರಡು ವಾರ ನಂತರ ಶಾಲೆ ಶುರು

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಅ.30ರಂದು ಪಿಯು ಕಾಲೇಜುಗಳನ್ನು ಮಾತ್ರವೇ ಷರತ್ತುಗಳಿಗೆ ಒಳಪಟ್ಟು ಹಂತ ಹಂತವಾಗಿ ಮರು ಆರಂಭಿಸಲು ದ.ಕ ಜಿಲ್ಲಾಡಳಿತ ನಿರ್ಧಾರಕ್ಕೆ ಬಂದಿದೆ. ಆದರೆ ಶಾಲೆಗಳನ್ನು ಮಾತ್ರ ಎರಡು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಶುರುಮಾಡಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಲೇಜುಗಳ ಆಡಳಿತ ಮಂಡಳಿಗಳು ಯಾವ ರೀತಿ ತರಗತಿ ನಡೆಸಬಹುದು ಎನ್ನುವ ಬಗ್ಗೆ ಅವರಿಂದಲೇ ವರದಿ ಕೇಳಲಾಗಿದೆ. ಮನೆಯಿಂದ ನೇರವಾಗಿ ಕಾಲೇಜಿಗೆ ಬರುವವರು ಹಾಗೂ ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ತರಗತಿಗೆ ಹಾಜರಾಗುವವರನ್ನು ಯಾವ ರೀತಿ ತರಗತಿಯಲ್ಲಿ ಕುಳ್ಳಿರಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ.

    ಪಿಯು ಮಕ್ಕಳು ವೃತ್ತಿಪರ ಕೋರ್ಸ್, ಸಿಇಟಿ ಇತ್ಯಾದಿಗೆ ಸಿದ್ಧತೆ ನಡೆಸಬೇಕಿರುವುದರಿಂದ ಹಂತ ಹಂತವಾಗಿ ಪಿಯು ಕಾಲೇಜುಗಳನ್ನು ತೆರೆಯಬೇಕಾಗಿದೆ. ಬರುವ ಮಕ್ಕಳನ್ನು ಒಂದು ವಾರ ಕ್ವಾರಂಟೈನ್ ಮಾಡಿ, ಆರೋಗ್ಯ ತಪಾಸಣೆ ನಡೆಸಿ ತರಗತಿ ಶುರು ಮಾಡಬಹುದು. ಆ ಬಳಿಕ ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
    ಸಚಿವ ಎಸ್.ಅಂಗಾರ ಮಾತನಾಡಿ, ಕೋವಿಡ್ ಸೋಂಕಿನ ಈ ಸಂದರ್ಭದಲ್ಲಿ ಕಾಲೇಜುಗಳು ಕೈಗೊಳ್ಳುವ ನಿಯಮಗಳನ್ನು ಕೂಡಲೇ ತಿಳಿಸಬೇಕು, ಈ ಹಿಂದೆ ಎಸ್‌ಎಸ್‌ಎಲ್ಸಿ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿದ ವೇಳೆ ಕೈಗೊಂಡ ಕ್ರಮಗಳನ್ನು ಪಾಲಿಸುವಂತೆ ಅವರು ಸಲಹೆ ನೀಡಿದರು.

    ಪಿಯು ಆರಂಭಕ್ಕೆ ಷರತ್ತುಗಳು: ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿ ತರಬೇಕು. ಸೋಂಕಿತರು 7 ದಿನ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು. ಕ್ವಾರಂಟೈನ್‌ನಿಂದ ಹೊರಬಂದ ನಂತರ ಮತ್ತೊಮ್ಮೆ ಆರ್‌ಟಿಪಿಸಿಆರ್ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತಿಗೊಳಪಟ್ಟು ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ವಿದ್ಯಾರ್ಥಿಗಳು ಕೋವಿಡ್‌ನಿಂದ ಸುರಕ್ಷಿತವಾಗಿ ಕಾಲೇಜಿಗೆ ಹಾಜರಾಗುವ ಬಗ್ಗೆ ಸಂಬಂಧಿಸಿದ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿಯನ್ನು ಸಿದ್ಧಪಡಿಸಿ, ಅದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಡಿಸಿ ತಿಳಿಸಿದರು.

    ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಸಂಜೀವ ಮಠಂದೂರು, ಪ್ರತಾಪ್ ಚಂದ್ರ ನಾಯಕ್ ಮಾತನಾಡಿದರು.

    ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ , ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್ ಕುಮಾರ್ ಇದ್ದರು.

    ಹೊರರಾಜ್ಯದಿಂದ ಬಂದ 900 ವಿದ್ಯಾರ್ಥಿಗಳು ಪಾಸಿಟಿವ್: ಹೊರರಾಜ್ಯದಿಂದ ಜಿಲ್ಲೆಗೆ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಬಂದಿದ್ದ 900 ವಿದ್ಯಾರ್ಥಿಗಳು ಈಗ ಪಾಸಿಟಿವ್ ಆಗಿದ್ದಾರೆ, ಆ ವಿದ್ಯಾಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕ್ವಾರಂಟೈನ್ ಮಾಡಲೇಬೇಕು, ಇಲ್ಲದಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದೇನೆ ಎಂದರು. ಹಿಂದೆ ಶೇ.5ರ ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ದರ ಈಗ 3ರ ಸುಮಾರಿನಲ್ಲಿದೆ. ಟೆಸ್ಟ್ ಪ್ರಮಾಣವನ್ನು 15 ಸಾವಿರಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ. ಒಂದು ವೇಳೆ ಸಾಮುದಾಯಿಕವಾಗಿ ಸೋಂಕು ತಗಲಿದ್ದರೂ ಇದರಿಂದ ಗೊತ್ತಾಗಬಹುದು, ಇಲ್ಲದಿದ್ದರೆ ಪಾಸಿಟಿವಿಟಿ ದರ ಇಳಿಕೆಯಾಗಬಹುದು ಎಂದರು.

    ಉಡುಪಿಯಲ್ಲೂ ತೆರೆಯದು ಸ್ಕೂಲ್
    ಉಡುಪಿ: ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಕರೊನಾ ಪಾಸಿಟಿವಿಟಿ ದರ ಸರಾಸರಿ ಶೇ 2.5ರಿಂದ 3ರಷ್ಟಿದೆ. ಆಗಸ್ಟ್ ಅಂತ್ಯದೊಳಗೆ ಈ ಪ್ರಮಾಣ ಶೇ. 2ಕ್ಕಿಂತ ಇಳಿಸುವುದು ಜಿಲ್ಲಾಡಳಿತ ಗುರಿ. ಪಾಸಿಟಿವಿಟಿ ದರ ಇಳಿಕೆಯಾದ ಬಳಿಕವೇ ಶಾಲಾ-ಕಾಲೇಜು ಪ್ರಾರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದ್ಯ ದಿನಕ್ಕೆ 6 ಸಾವಿರದಿಂದ 7 ಸಾವಿರ ಸ್ವಾಬ್ ಪರೀಕ್ಷೆ ಮಾಡಲಾಗುತ್ತಿದೆ. ಇದನ್ನು 10 ಸಾವಿರಕ್ಕೆ ಏರಿಸಲು ಸೂಚನೆ ನೀಡಲಾಗಿದೆ. 65 ಸ್ವಾಬ್ ಸಂಗ್ರಹ ಕೇಂದ್ರಗಳಿದ್ದು, ಪರೀಕ್ಷೆ ಹೆಚ್ಚಳಕ್ಕೆ ಅನುಕೂಲವಾಗುವಂತೆ ಸ್ವಾಬ್ ಕಲೆಕ್ಟರ್, ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದವರಿಗೆ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಮಾರ್ಗಸೂಚಿ ಪ್ರಕಾರ ಸೂಕ್ತ ರೀತಿಯಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಿಸಿದರೆ ಮಾತ್ರ ಶಾಲಾರಂಭ ಸಾಧ್ಯ ಎಂದರು.

    ಜಿಲ್ಲೆಯಲ್ಲಿ 20 ಸಾವಿರ ಮಂದಿ 2ನೇ ಡೋಸ್ ಪಡೆಯಲು ಬಾಕಿಯಿದ್ದು, ಕಳೆದ ವಾರದಿಂದ ಜಿಲ್ಲೆಗೆ ಸರಾಸರಿ ದಿನಕ್ಕೆ 8 ಸಾವಿರ ದಿಂದ 10 ಸಾವಿರ ಡೋಸ್ ಲಸಿಕೆ ಸರಬರಾಜಾಗುತ್ತಿದೆ. ದಿನಕ್ಕೆ 20 ಸಾವಿರ ಮಂದಿಗೆ ಲಸಿಕೆ ನೀಡುವಷ್ಟು ಮೂಲಸೌಕರ್ಯ ಹೊಂದಿದ್ದು, ಲಸಿಕೆ ವಿತರಣೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಫಲಾನುಭವಿಗಳಲ್ಲಿ ಶೇ.64ರಷ್ಟು ಮಂದಿಗೆ ಹಾಗೂ 60 ವರ್ಷ ಮೇಲ್ಪಟ್ಟ ಶೇ. 85ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.
    – ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts