More

    ಭೋಜನಕೂಟ ಏರ್ಪಡಿಸಿದ್ದ ಸೋಂಕಿತ ಮಹಿಳೆ!

    ಅಥಣಿ (ಬೆಳಗಾವಿ): ಜಾರ್ಖಂಡ್ ರಾಜ್ಯದ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ಗ್ರಾಮವೊಂದರಲ್ಲಿ ಬಂಧು-ಬಳಗದವರಿಗೆಲ್ಲ ಏರ್ಪಡಿಸಿದ್ದ ಭೋಜನಕೂಟದಲ್ಲಿ ಅಡುಗೆ ಬಡಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದರಿಂದ ಅಥಣಿ ತಾಲೂಕಿನ ಖವಟಗೊಪ್ಪ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

    ತಾಲೂಕಿನ 44 ಜನರು ಜಾರ್ಖಂಡ್ ರಾಜ್ಯದ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬಂದಿದ್ದರು. ಅವರಲ್ಲಿ ಸವದಿ ಗ್ರಾಮದ 7, ನಂದಗಾಂವ-3 ಹಾಗೂ ಬೆಳವಕ್ಕಿ, ಜುಂಜರವಾಡ ಮತ್ತು ಹುಕ್ಕೇರಿ ಪಟ್ಟಣದಲ್ಲಿ ತಲಾ 1 ಸೇರಿ ಒಟ್ಟು 13 ಜನರಲ್ಲಿ ಮಂಗಳವಾರ ಕರೊನಾ ವೈರಸ್ ದೃಢಪಟ್ಟಿತ್ತು. ಇವರಲ್ಲಿ ಸೋಂಕಿತ ಮಹಿಳೆಯೊಬ್ಬಳು ಧಾರ್ಮಿಕ ಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ವಾಡಿಕೆಯಂತೆ ತನ್ನ ಬಂಧು, ಬಳಗದವರೆಲ್ಲರಿಗೂ ಭೋಜನಕೂಟ ಏರ್ಪಡಿಸಿ, ಎಲ್ಲರಿಗೂ ಅಡುಗೆ ಬಡಿಸಿದ್ದಳು. ಆ ಮಹಿಳೆಗೆ ಸೋಂಕು ದೃಢಪಟ್ಟಿರುವುದರಿಂದ ಖವಟಗೊಪ್ಪ ಗ್ರಾಮಸ್ಥರು ಸೇರಿ ಸುತ್ತಮುತಲ ಹಳ್ಳಿಯ ಜನರು ತಮ್ಮನೆಲ್ಲ ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಲ್ಲಿದ್ದಾರೆ. ಕ್ವಾರಂಟೈನ್‌ಗೆ ಹೆದರಿ ಭೋಜನಕೂಟದಲ್ಲಿ ಭಾಗವಹಿಸಿರುವವರೂ ಅಲ್ಲಗಳೆಯುತ್ತಿದ್ದಾರೆ.

    ಎಲ್ಲರ ತಪಾಸಣೆ: ಸೋಂಕಿತೆಯೊಂದಿಗೆ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಸಿಬ್ಬಂದಿಗೆ ಪತ್ತೆ ಹಚ್ಚುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವೈದ್ಯಾಧಿಕಾರಿ ಡಾ. ಶೈಲಜಾ ತಿಳಿಸಿದ್ದಾರೆ.

    ಸೋಂಕಿತ ಮಹಿಳೆ ಭೋಜನಕೂಟ ಏರ್ಪಡಿಸಿದ್ದರ ಕುರಿತು ಖಚಿತ ಮಾಹಿತಿ ಇಲ್ಲ. ಮಹಿಳೆಯ ಪ್ರವಾಸದ ವಿವರ ಮತ್ತು ಅವರೊಂದಿಗೆ ಪ್ರಾರ್ಥಮಿಕ, ದ್ವಿತೀಯ ಸಂಪರ್ಕ ಹೊಂದಿರುವವರ ಕುರಿತು ವೈದ್ಯಾಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವರದಿ ಬಳಿಕ ಮಾಹಿತಿ ಸಿಗಲಿದೆ.
    | ಡಾ. ಎಸ್.ವಿ. ಮುನ್ಯಾಳ ಜಿಲ್ಲಾ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts