More

    ಭಿನ್ನ ಕೋಮಿನ ಜೋಡಿ ಪಯಣಕ್ಕೆ ತಡೆ, ಯುವಕನಿಗೆ ಮಾರಣಾಂತಿಕ ಹಲ್ಲೆ

    ಮಂಗಳೂರು: ಹಿಂದು ಸಂಘಟನೆ ಯುವಕರು ನಗರದ ಪಂಪ್‌ವೆಲ್‌ನಲ್ಲಿ ಗುರುವಾರ ರಾತ್ರಿ ಖಾಸಗಿ ಬಸ್ಸನ್ನು ತಡೆದು, ಅದರಲ್ಲಿದ್ದ ಭಿನ್ನಕೋಮಿನ ಯುವ ಜೋಡಿಯನ್ನು ಕೆಳಕ್ಕಿಳಿಸಿ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಜೋಕಟ್ಟೆಯ ಅಸ್ವಿದ್ ಅನ್ವರ್ ಮೊಹಮ್ಮದ್ (23) ಗಾಯಾಳು. ಸೊಂಟದ ಭಾಗಕ್ಕೆ ಚೂರಿ ಇರಿತ, ಮೂಗು ಹಾಗೂ ಮುಖದ ಭಾಗದಲ್ಲಿ ಗುದ್ದಿದ ಗಾಯವಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವತಿ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ಬಾಬುಗುಡ್ಡೆಯ ಬಾಲಚಂದ್ರ (28), ಕಂದುಕ ನಿವಾಸಿ ಧನುಷ್ ಭಂಡಾರಿ (25), ಶಕ್ತಿನಗರದ ಜಯಪ್ರಶಾಂತ್ (27), ಉರ್ವ ನಿವಾಸಿ ಅನಿಲ್ ಕುಮಾರ್(38) ಬಂಧಿತರು. ಧನುಷ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.

    ಬಿಜೈ ಬಸ್ ನಿಲ್ದಾಣದ ಬಳಿಯಿಂದ ಹೊರಟಿದ್ದ ಖಾಸಗಿ ಬಸ್ಸನ್ನು ಯುವಕರ ತಂಡ ಪಂಪ್‌ವೆಲ್‌ನಲ್ಲಿ ತಡೆದಿದ್ದು, ಯುವತಿಯನ್ನು ಇಳಿಸುವಾಗ ಜತೆಗೆ ಯುವಕನೂ ಇಳಿದಿದ್ದಾನೆ. ಈ ಸಂದರ್ಭ ತಂಡ ಆತನ ಮೇಲೆ ಹಲ್ಲೆ ನಡೆಸಿದೆ. ತಡೆಯಲು ಯತ್ನಿಸಿದ ಯುವತಿಗೂ ಹಲ್ಲೆ ನಡೆಸಲಾಗಿದೆ. ಯುವಕನ ಸೊಂಟದಲ್ಲಿ ನಾಲ್ಕು ಇಂಚು ಆಳಕ್ಕೆ ಇರಿತದ ಗಾಯವಾಗಿದೆ. ಘಟನೆ ಬಳಿಕ ಬಸ್ ಬೆಂಗಳೂರಿಗೆ ತೆರಳಿದ್ದು, ಪ್ರಯಾಣಿಕರನ್ನು ಇಳಿಸಿ ತಕ್ಷಣ ಮಂಗಳೂರಿಗೆ ಬರಲು ಹೇಳಿದ್ದೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

    ತ್ವರಿತ ಕಾರ್ಯಾಚರಣೆ: ತಕ್ಷಣ ಡಿಸಿಪಿ ಹರಿರಾಂ ಶಂಕರ್ ಹಾಗೂ ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ವಿಡಿಯೋ ವೀಕ್ಷಿಸಿ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

    ಉದ್ಯೋಗ ಅರಸಿ ಹೊರಟಿದ್ದ ಯುವತಿ: ಯುವಕ-ಯುವತಿ ನಗರದ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವರು. ಇಬ್ಬರೂ ಪದವಿ ಪೂರೈಸಿದ್ದರು. ಯುವತಿ ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗ ಹುಡುಕಲು ಹೊರಟಿದ್ದು, ಸಹಾಯಕ್ಕಾಗಿ ಸಹಪಾಠಿಯನ್ನು ಕರೆದೊಯ್ದಿದ್ದಳು. ಅವರಿಬ್ಬರು ನಗರದಲ್ಲಿ ಹಲವು ಬಾರಿ ಜತೆಗೆ ಓಡಾಡುತ್ತಿರುವುದನ್ನು ಸಂಘಟನೆ ಕಾರ್ಯಕರ್ತರು ಮೊದಲೇ ಗಮನಿಸಿದ್ದರು. ಬೆಂಗಳೂರಿಗೆ ಜತೆಯಾಗಿ ಹೊರಟಿರುವುದೂ ಗಮನಕ್ಕೆ ಬಂದಿತ್ತು. ಯುವತಿಯನ್ನು ಆಕೆಯ ಮನೆಯವರ ವಶಕ್ಕೆ ಒಪ್ಪಿಸಲಾಗಿದೆ.

    ಜನಸಂದಣಿ ಇರುವಲ್ಲಿ ಭದ್ರತೆ ಹೆಚ್ಚಳ: ಎರಡು ತಿಂಗಳ ಅವಧಿಯಲ್ಲಿ ಇಂಥ ಮೂರ್ನಾಲ್ಕು ಪ್ರಕರಣ ನಡೆದಿರುವ ಹಿನ್ನೆಲೆಯಲ್ಲಿ ನಗರದ ರೈಲ್ವೆ, ಬಸ್ ನಿಲ್ದಾಣ, ಬಸ್ ತಂಗುದಾಣ, ಪ್ರವಾಸಿ ತಾಣ, ಬೀಚ್‌ಗಳಲ್ಲಿ ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಮುಸ್ಸಂಜೆ ಹಾಗೂ ತಡರಾತ್ರಿ ಹೆಚ್ಚಿನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಲಾಗುವುದು. ಮಫ್ತಿಯಲ್ಲೂ ಪೊಲೀಸರು ನಿಗಾ ಇಡಲಿದ್ದಾರೆ. ಅಬ್ಬಕ್ಕ ಪಡೆಯನ್ನು ಸಕ್ರಿಯಗೊಳಿಸಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.

    ಲವ್ ಜಿಹಾದ್ ತಡೆಗೆ ಕಠಿಣ ಕಾನೂನು: ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಒತ್ತಾಯ

    ಮಂಗಳೂರು: ಪ್ರೇಮದ ಮುಖವಾಡ ಧರಿಸಿ ನಿರಂತರ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ರೂಪಿಸುವಂತೆ ಬಜರಂಗದಳ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

    ಬಸ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಯುವ ಜೋಡಿಯನ್ನು ತಡೆದ ಸಂದರ್ಭ ಸಂಭವಿಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಹಿಂಪಡೆಯುವಂತೆ ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಇಂಥ ಪ್ರಕರಣಗಳು ನಡೆದಾಗ ನಮ್ಮ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸುತ್ತಾರೆ. ಸಾರ್ವಜನಿಕರು ಫೋಟೋ, ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಆಕ್ರೋಶಕ್ಕೆ ಒಳಗಾಗುವ ಸಾರ್ವಜನಿಕರಲ್ಲಿ ಕೆಲವರು ತಪ್ಪಿತಸ್ಥರನ್ನು ಥಳಿಸುತ್ತಾರೆ. ಇದನ್ನು ಸಂಘಟನೆ ಬೆಂಬಲಿಸುವುದಿಲ್ಲ. ಪೊಲೀಸ್ ಇಲಾಖೆ ಸತ್ಯಾಸತ್ಯತೆ ಪರಿಶೀಲಿಸದೆ ಸಂಘಟನೆ ಕಾರ್ಯಕರ್ತರು, ಮುಖಂಡರ ಮೇಲೆ ಕೇಸು ದಾಖಲಿಸಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು.
    ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಶ್ರೀಧರ ತೆಂಕಿಲ ಮತ್ತು ಜಿಲ್ಲಾ ಸಾಪ್ತಾಹಿಕ್ ದೀಪಕ್ ಮರೋಳಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಹಿಂದು ಕುಟುಂಬಗಳ ರಕ್ಷಣೆ: ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಪಂಪ್‌ವೆಲ್, ಬೆಳ್ತಂಗಡಿ, ಸುರತ್ಕಲ್ ಸಹಿತ ಸುಮಾರು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಹಿಂದು ಹೆಣ್ಣು ಮಕ್ಕಳನ್ನು ಪ್ರಾಮಪಾಶಕ್ಕೆ ಸಿಲುಕಿಸಿ ಮತಾಂತರಕ್ಕೆ ಷಡ್ಯಂತ್ರ ನಡೆಯುತ್ತಿದ್ದು, ಹಿಂದು ಕುಟುಂಬಗಳ ರಕ್ಷಣೆ ಹಿಂದು ಸಂಘಟನೆಗಳ ಜವಾಬ್ದಾರಿಯಾಗಿದೆ ಎಂದು ಸುನೀಲ್ ಹೇಳಿದರು. ಇಂತಹ ಪ್ರಕರಣಗಳನ್ನು ತಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳಿಗೆ ಕಡಿವಾಣ ಹಾಕಲು ಬಜರಂಗದಳ ಕಾರ್ಯಕರ್ತರೇ ಮುಂದಾಗಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts