More

    ಸಂಸ್ಕೃತಿ ಸಂಸ್ಕಾರ ನಾಶದಿಂದ ಧರ್ಮ ಅವನತಿ: ಬಾಳೇಕುದ್ರು ಶ್ರೀ ನೃಸಿಂಹಾಶ್ರಮ ಸಾಮೀಜಿ ಹೇಳಿಕೆ

    ಕೋಟ: ಸಂಸ್ಕೃತಿ ಸಂಸ್ಕಾರಗಳ ನಾಶದಿಂದ ಧರ್ಮ ಅವನತಿಗೆ ತಲುಪುತ್ತದೆ. ಎಲ್ಲ ಮನೆಗಳಲ್ಲಿ ಧರ್ಮ ಜಾಗೃತಿಗೊಳಿಸುವ ಕಾರ್ಯ ನಡೆಯಲಿ ಎಂದು ಹಂಗಾರಕಟ್ಟೆ ಬಾಳೇಕುದ್ರು ಶ್ರೀ ನೃಸಿಂಹಾಶ್ರಮ ಸಾಮೀಜಿ ಹೇಳಿದರು.

    ಕೋಟದ ಮಣೂರು ಪಡುಕರೆ ಶನೇಶ್ವರ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಠ ಮಂದಿರಗಳು ಹಿಂದುಗಳ ಶ್ರದ್ಧಾ ಕೇಂದ್ರದ ಪ್ರಮುಖ ಭಾಗಗಳು. ನಮ್ಮ ಧರ್ಮಕ್ಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಲು ಕೆಲವು ಬುದ್ಧಿಜೀವಿಗಳು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ಶ್ರೀಗಳು ಸಲಹೆ ನೀಡಿದರು.

    ಕೋಟ ಅಮೃತೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮಂದಿರದಲ್ಲಿ ಮಾಲೆ ಧರಿಸಿದ ಅಯ್ಯಪ್ಪ ವ್ರತಧಾರಿಗಳು ಸ್ವಾಮೀಜಿಗೆ ಫಲಪುಷ್ಪ ನೀಡಿ ಆಶೀರ್ವಾದ ಪಡೆದರು.
    57 ಬಾರಿ ವ್ರತಧಾರಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ರಘು ಗುರುಸ್ವಾಮಿ, 27ಬಾರಿ ವ್ರತಧಾರಿಯಾಗಿದ್ದ ಮಂದಿರದ ವ್ಯವಸ್ಥಾಪಕ ರಾಮ ಗುರುಸ್ವಾಮಿ, ಕೋಟದ ಪರಿವರ್ತನಾ ಪುನರ್ವಸತಿ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಪ್ರಕಾಶ್ ತೋಳಾರ್, ಉಪಸ್ಥಿತರಿದ್ದರು.

    ಧಾರ್ಮಿಕ ಕಾರ್ಯಕ್ರಮವನ್ನು ಮಧುಸೂದನ ಬಾಯಿರಿ ನೆರವೇರಿಸಿದರು. ಜಟ್ಟಿಗೇಶ್ವರ ದೇವಳದಿಂದ ಮಂದಿರದವರೆಗೆ ಸ್ವಾಮೀಜಿಯವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕಾರ್ಯಕ್ರಮ ಸಂಯೋಜಕ ಚಂದ್ರ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ಮಹಾಅನ್ನಪ್ರಸಾದ ವಿತರಣೆ, ನಾಗರಾಜ್ ಖಾರ್ವಿ ಅವರಿಂದ ಭಕ್ತಿ ಸುಧೆ, ಸಾಯಂಕಾಲ ಶನೇಶ್ವರ ಕಥಾ ಪಾರಾಯಣ, ರಾತ್ರಿ ಶನೇಶ್ವರ ಸ್ವಾಮಿ ಪಾದಪೂಜೆ ಕಾರ್ಯಕ್ರಮಗಳು ನೆರವೇರಿತು.

    ದೇವಳಗಳು ಇಲಾಖೆಯಿಂದ ಮುಕ್ತವಾಗಲಿ
    ಹಿಂದುಗಳ ಶ್ರದ್ಧಾಕೇಂದ್ರಗಳು ಸರ್ಕಾರದ ಅಧೀನದಿಂದ ಮುಕ್ತರಾಗಬೇಕು. ಏಕೆಂದರೆ ಅಲ್ಲಿನ ಹಣವನ್ನು ಇತರ ಧರ್ಮಗಳ ಅಭಿವೃದ್ಧಿ ಹೋಗುತ್ತಿರುವ ವಿಚಾರ ಹರಿದಾಡುತ್ತಿದೆ. ಆದರೆ ಕೋಟ ಶ್ರೀನಿವಾಸ ಪೂಜಾರಿ ಸಚಿವರಾದ ಮೇಲೆ ನಮ್ಮ ದೇಗುಲಗಳಲ್ಲಿ ಶೇಖರಣೆಯಾದ ಹಣ ನಮ್ಮ ದೇಗುಲಗಳ ಅಭಿವೃದ್ಧಿಗೇ ಸಲ್ಲುತ್ತಿದೆ. ಆದರೂ ಹಿಂದು ದೇವಾಲಯಗಳು ಸರ್ಕಾರದ ಅಧೀನದಿಂದ ಮುಕ್ತವಾಗಬೇಕಿದೆ ಎಂದು ಶ್ರೀ ನೃಸಿಂಹಾಶ್ರಮ ಸಾಮೀಜಿ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts