More

    ರಾಮ ಮಂದಿರಕ್ಕಾಗಿ ೫೦೦ ವರ್ಷ ವನವಾಸ

    ಸೇಡಂ: ರಾಮನಿಗಾಗಿ ನೂರಾರು ವರ್ಷಗಳ ಕಾಲ ಸಂಘರ್ಷದ ಹಾದಿಯಲ್ಲಿಯೇ ಹೆಜ್ಜೆ ಹಾಕಿದ್ದೇವೆ. ಅಸಂಖ್ಯಾತ ಹಿಂದುಗಳ ತ್ಯಾಗ, ಬಲಿದಾನ ಹಾಗೂ ಪ್ರಾರ್ಥನೆಯಿಂದಲೇ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಿದ್ದು, ನಮ್ಮೆಲ್ಲರ ಕನಸು ನನಸಾಗಿದೆ ಎಂದು ಹುಬ್ಬಳ್ಳಿಯ ವಾಗ್ಮಿ ಡಾ.ಎ.ಸಿ.ವಾಲಿ ಗುರೂಜಿ ಹೇಳಿದರು.

    ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಅಯೋಧ್ಯಾಪತಿ ಶ್ರೀರಾಮೋತ್ಸವ ಸಮಿತಿ ಹಾಗೂ ಶ್ರೀರಾಮೋತ್ಸವ ಸ್ವಾಗತ ಸಮಿತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮಂದಿರ ಕಟ್ಟಬೇಕೆಂದು ಶ್ರೀರಾಮ ಭಕ್ತರು ಹಸಿವು, ನಿದ್ದೆ, ನೀರಡಿಕೆಯನ್ನು ಲೆಕ್ಕಿಸದೆ ಹೋರಾಟ ಮಾಡಿದ್ದಾರೆ. ಸಾವಿರಾರು ಜನ ಕರ ಸೇವಕರು ತಮ್ಮ ನೆತ್ತರು ಸುರಿಸಿ, ಪ್ರಾಣ ತ್ಯಾಗ ಮಾಡಿದ್ದಾರೆ. ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀ ರಾಮ ೧೪ವರ್ಷ ವನವಾಸ ಮಾಡಿದರೆ, ನಮ್ಮ ಪ್ರಭುವಿನ ಮಂದಿರ ಕಟ್ಟಲು ೫೦೦ ವರ್ಷ ವನವಾಸ ಮಾಡಬೇಕಾಯಿತು ಎಂದರು.

    ಭಾರತದ ವಾಸಿಗಳೆಲ್ಲರೂ ಜಾತಿ, ಮತಗಳನ್ನು ಮೀಗಿಲಾಗಿ ನಾವು ಹಿಂದೂಗಳು ಎನ್ನುವ ಜಾಗೃತಿ ಮೂಡಿಸಿಕೊಳ್ಳಬೇಕಿದೆ. ಮೇಲು-ಕೀಳುಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಇದ್ದರೆ ಮಾತ್ರ ನಮಗೆ ಉಳಿಗಾಲವಿದೆ. ಜಾತಿಗಳಲ್ಲಿ ನಾವು ಮುಳಿಗಿ ಹೋದರೆ ಒಂದಲ್ಲ ಒಂದು ದಿನ ಇದರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಸತ್ಯನಾರಾಯಣ ಮಹಾರಾಜ, ಕೊತ್ತಲ ಬಸವೇಶ್ವರ ಸಮಿತಿ ಸಂರಕ್ಷಕಿ ಬಸಲಿಂಗಮ್ಮ ಪಾಟೀಲ್, ಆರ್‌ಎಸ್‌ಎಸ್‌ನ ವಿಜಯ ಮಹಾಂತೇಶಜಿ, ಪ್ರಮುಖರಾದ ಪ್ರಕಾಶ ಕುಲಕರ್ಣಿ, ಬಸವಪ್ರಸಾದ ಅವಂಟಿ ಇತರರಿದ್ದರು.

    ಶರಣು ಕೆರಳ್ಳಿ ಪ್ರಾರ್ಥಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಪವಾರ್ ಸ್ವಾಗತಿಸಿದರು. ಸದಸ್ಯ ಶಿವಕುಮಾರ ನಿಡಗುಂದಾ ನಿರೂಪಣೆ ಮಾಡಿ, ಪ್ರಾಸ್ತಾವಿಕ ಮಾತನಾಡಿದರು. ಅಯೋಧ್ಯಾಪತಿ ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಮಾಲಪಾಣಿ ವಂದಿಸಿದರು.

    ಗಮನಸೆಳೆದ ಅದ್ದೂರಿ ಮೆರವಣಿಗೆ: ಶ್ರೀರಾಮೋತ್ಸವ ಸಮಾರಂಭದ ನಿಮಿತ್ತ ಸೇಡಂನ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಹಾಗೂ ವೇಷಧಾರಿಗಳ ಅದ್ದೂರಿ ಮೆರವಣಿಗೆ ಶನಿವಾರ ಬೆಳಗ್ಗೆ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕೊತ್ತಲ ಬಸವೇಶ್ವರ ದೇಗುಲವರೆಗೂ ಶೋಭಾಯಾತ್ರೆ ಸಾಗಿತು. ಹಾದಿಯುದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸಿದರು. ಹನುಮಂತ ವೇಷಧಾರಿಗಳು ಜನರೊಂದಿಗೆ ತಿರುಗಾಡಿ ಭಕ್ತಿ ಪಸರಿಸಿದರು. ಬಹುತೇಕರ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಅಲಂಕೃತ ಸಾರೋಟದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಮಹರ್ಷಿ ವಾಲ್ಮೀಕಿ ವೇಷಧಾರಿ ಕುಳಿತಿದ್ದರು. ಡೊಳ್ಳು ಕುಣಿತ ಸೇರಿ ವಿವಿಧ ವಾದ್ಯಮೇಳಗಳು ಗಮನಸೆಳೆದವು. ಜೈ ಶ್ರೀರಾಮ್.. ಜೈ ಹನುಮಾನ್.. ಜೈಜೈ ರಾಮ್.. ಘೋಷಣೆಗಳು ಮೊಳಗಿದವು.

    ಅಂದು ಸೀತಾ ಮಾತೆಯನ್ನು ರಾವಣ ಹೊತ್ತುಕೊಂಡು ಹೋದಾಗ, ಲಂಕೆಗೆ ನಮ್ಮ ಕಿಷ್ಕಿಂದೆಯ ಹನುಮಂತ ಬೆಂಕಿ ಇಟ್ಟಿದ್ದ. ಅದೇ ರೀತಿ ಇಂದು ಕೆಲ ದುಷ್ಟ ಶಕ್ತಿಗಳು ನಮ್ಮ ಹೆಣ್ಣುಮಕ್ಕಳನ್ನು ಅಮಾನುಷವಾಗಿ ಕೊಲೆ, ಅತ್ಯಾಚಾರ ಮಾಡುತ್ತಿದ್ದಾರೆ. ಸನಾತನ ಹಿಂದೂ ಧರ್ಮದ ಪ್ರತಿಯೊಬ್ಬರೂ ವೀರಾಂಜನೇಯರಾಗಬೇಕಿದೆ.
    | ಡಾ.ಎ.ಸಿ.ವಾಲಿ, ವಾಗ್ಮಿ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts