More

    ಕೋಣಂದೂರು ಬೃಹನ್ಮಠದಲ್ಲಿ ಧನುರ್ಮಾಸ ಪೂಜೆ

    ನುರ್ಮಾಸದಲ್ಲಿ ಒಂದು ದಿನ ಪೂಜೆ ಮಾಡಿದರೆ; ಸಾವಿರ ದಿನಗಳು ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ, ಈ ಮಾಸದ ಬ್ರಾಹ್ಮೀಮುಹೂರ್ತದಲ್ಲಿ ದೇವತೆಗಳು ಭೂಲೋಕದಲ್ಲಿ ಸಂಚಾರ ಮಾಡುತ್ತಾರೆಂಬ ನಂಬಿಕೆ ಇದೆ. ಮಕರ ಸಂಕ್ರಮಣದ ಉತ್ತರಾಯಣ ಪುಣ್ಯಕಾಲದವರೆಗೆ ಇರುವ ಧನುರ್ವಸ ಪೂಜೆಯ ಮಹತ್ವವನ್ನು ಮಲೆನಾಡಿನ ಭಕ್ತರಿಗೆ ತಿಳಿಯಪಡಿಸಿದ ಕೀರ್ತಿ ಕೋಣಂದೂರು ಬೃಹನ್ಮಠಕ್ಕೆ ಸಲ್ಲುತ್ತದೆ.

    ಈ ಹಿನ್ನೆಲೆಯಲ್ಲಿ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶ್ರೀ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ ಪರಮ ಶಿಷ್ಯರಾಗಿದ್ದ ಕೋಣಂದೂರಿನ ಲಿಂಗೈಕ್ಯ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಒಂದು ತಿಂಗಳ ಪರ್ಯಂತ ಬ್ರಾಹ್ಮೀಮುಹೂರ್ತದಲ್ಲಿ ಇಷ್ಟಲಿಂಗ ಮಹಾಪೂಜೆಯ ಜತೆಗೆ ದೇವಿ ಆರಾಧನೆಯನ್ನು ಮಾಡುತ್ತಿದ್ದರು. ಬೆಳಗಿನ ಮೂರು ಗಂಟೆಗೆ ಆರಂಭವಾಗುತ್ತಿದ್ದ ಶಿವಪೂಜಾನುಷ್ಠಾನ ಸೂರ್ಯೋದಯಕ್ಕೆ ಸರಿಯಾಗಿ ಮಂಗಲವಾಗುತ್ತಿತ್ತು. ಒಂದು ತಿಂಗಳ ಕಾಲ ನಿತ್ಯ ಅನುಷ್ಠಾನ ಕೈಗೊಳ್ಳುತ್ತಿದ್ದ ಶ್ರೀಗಳ ಕರಕಮಲ ಸಂಜಾತರಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳೂ ಕಳೆದೊಂದು ದಶಕದಿಂದ ತಮ್ಮ ಹಿರಿಯ ಗುರುಗಳ ಮಾರ್ಗದಲ್ಲೇ ಧನುರ್ವಸದ ಪೂಜಾನುಷ್ಠಾನವನ್ನು ಆಚರಿಸುತ್ತಿದ್ದಾರೆ.

    ಮಠದ ಗುರುಪರಂಪರೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬೃಹನ್ಮಠವು ಉಡೇವು ಮಠ ಎಂದು ಪ್ರಸಿದ್ಧವಾಗಿದೆ. ಉದ್ಭವ ಬಸವಣ್ಣನ ಪುಣ್ಯನೆಲದಲ್ಲಿ ಉಡೇವು ಶ್ರೀ ಶಿವಲಿಂಗ ಮಹಾಸ್ವಾಮಿಗಳು ಸುದೀರ್ಘ ತಪಸ್ಸುಗೈದು ಇಲ್ಲಿಯೇ ಐಕ್ಯರಾಗಿದ್ದಾರೆ. ಶಿವಲಿಂಗ ಮಹಾಸ್ವಾಮಿಗಳಿಂದಲೇ ಆರಂಭವಾದ ಕೋಣಂದೂರು ಮಠದ ಗುರುಪರಂಪೆಯಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ಮಠದ ನಿರ್ಮಾಣ ಕಾರ್ಯಗಳು ನಡೆದಿವೆ.

    ಶ್ರೀಶೈಲಪೀಠದ ಶಾಖಾಮಠಕ್ಕೆ ಸದ್ಯ ಇರುವ ಶ್ರೀ ಶ್ರೀಪತಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು ಅನುಷ್ಠಾನಮೂರ್ತಿಗಳು. ಆಧುನಿಕ ಯುಗದಲ್ಲೂ ಯಾವುದೇ ಆಡಂಭರಗಳಿಲ್ಲದೆ ಕೇವಲ ಭಕ್ತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಗುರುವಿನ ಮೂಲ ವೃತ್ತಿಯಾದ ಧರ್ಮಪ್ರಸಾರಕ್ಕಾಗಿ ಭಕ್ತರ ಮನೆಗಳಿಗೆ ತೆರಳಿ ಭಿಕ್ಷೆ ಬೇಡುವ ಪದ್ಧತಿಯನ್ನು ಇಂದಿಗೂ ಬಿಟ್ಟಿಲ್ಲ. ಭಕ್ತರು ಎಷ್ಟೇ ಕಾಣಿಕೆ, ಧವಸ-ಧಾನ್ಯಗಳನ್ನು ನೀಡಿದರೂ ಅದನ್ನು ಸ್ವೀಕಾರ ಮಾಡಿ ಮಠದ ಧರ್ಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪೂಜ್ಯರ ಈ ನಡೆ-ನುಡಿಗಳನ್ನು ಕಂಡು ಹೂವಿನಹಡಗಲಿ ತಾಲೂಕಿನ ಪುರ ಗ್ರಾಮದ ಹಿರೇಮಠದ ಸದ್ಭಕ್ತರು ಶ್ರೀಗಳಿಗೆ ತಮ್ಮ ಮಠದ ಜವಾಬ್ದಾರಿಗಳನ್ನೂ ವಹಿಸಿಕೊಟ್ಟಿರುವುದು ವಿಶೇಷ.

    ಸ್ವಾಮಿಗಳ ಅನುಷ್ಠಾನ: ಮಠಸಂಸ್ಕೃಯ ನಾಡಿನಲ್ಲಿ ಉತ್ಸವಾದಿಗಳು ಮಾಸಾನುಕ್ರಮದಲ್ಲಿ ನಡೆಯುತ್ತವೆ. ಅಂತೆಯೇ ಕೋಣಂದೂರು ಬೃಹನ್ಮಠದಲ್ಲಿ ಕೋಣಂದೂರು ಬೃಹನ್ಮಠದಲ್ಲಿ ವಾರ್ಷಿಕ ಉತ್ಸವವನ್ನಾಗಿ ಧನುರ್ವಸದ ಪೂಜೆಯನ್ನು ಆಚರಿಸಲಾಗುತ್ತಿದ್ದು, ಸದ್ಯ ನಡೆಯುತ್ತಿರುವ ಶ್ರೀಗಳ ಪೂಜಾನುಷ್ಠಾನ ಸಂಕ್ರಾಂತಿಯಂದು ಮಂಗಲಗೊಳ್ಳಲಿದೆ.

    ಜ. 14ರಂದು ಕರ್ತೃ ಶಿವಲಿಂಗೇಶ್ವರ ಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ, ಶಾಶ್ವತ ಮುತ್ತೈದೆ ಭಾಗ್ಯಕ್ಕಾಗಿ ದಂಪತಿಗಳಿಂದ ಮಾಂಗಲ್ಯಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ನಂತರ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆನಂದಪುರಂ ಮುರುಘಾಮಠ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ.

    ಸಮಾರಂಭದಲ್ಲಿ ಮಹಾನ್ ವಿದ್ವಾಂಸರಾದ ಕವಲೇದುರ್ಗ ಸಂಸ್ಥಾನ ಮಠದ ರಾಜಗುರು ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ 2019ನೇ ಸಾಲಿನ ಶಿವಲಿಂಗಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು, ಸಾಹಿತಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ.

     

    ಪ್ರಶಾಂತ ರಿಪ್ಪನ್​ಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts