More

    ಮುಳುಗಿದ ಹೂವಿನಹೆಡಗಿ ಸೇತುವೆ

    ದೇವದುರ್ಗ: ನಾರಾಯಣಪುರ ಜಲಾಶಯದ 27 ಕ್ರಸ್ಟ್ ಗೇಟ್ ತೆರೆದು ಕೃಷ್ಣಾ ನದಿಗೆ ಗುರುವಾರ 2.72 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.

    ಇದರಿಂದ ಕೃಷ್ಣಾ ನದಿ ಉಕ್ಕಿಹರಿಯುತ್ತಿರುವ ಕಾರಣ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಿದ್ದರೆ, ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬ್ರಿಡ್ಜ್ ಕಂ ಬ್ಯಾರೇಜ್ನ 60 ಗೇಟ್ ಮೇಲೆತ್ತಿ ಹೆಚ್ಚುವರಿ ಬರುತ್ತಿರುವ ನೀರನ್ನು ಹೊರ ಹರಿಸಲಾಗುತ್ತಿದೆ.

    ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ 1 ವಾರದಿಂದ ಮುಳುಗಿದೆ. ನದಿದಂಡೆಯ ಹೊಲಗಳಿಗೆ ನೀರು ನುಗ್ಗಿದ್ದರಿಂದ ನಾಟಿಮಾಡಿದ ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಗೆ ಹಾನಿಯಾಗಿದೆ. ಇತಿಹಾಸ ಪ್ರಸಿದ್ಧ ಕೊಪ್ಪರದ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಜಲಾವೃತವಾಗಿದ್ದು, ಇನ್ನೂ ನೀರು ಇಡಿಮೆಯಾಗಿಲ್ಲ. ಸದ್ಯ ಪೂಜೆ, ಪುನಸ್ಕಾರ ನಿಲ್ಲಿಸಲಾಗಿದೆ. ಗೂಗಲ್ನ ಶ್ರೀ ಅಲ್ಲಮಪ್ರಭು ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು, ಮುಳುಗಡೆ ಭೀತಿ ಎದುರಾಗಿದೆ. ನದಿ ತೀರದ 23 ಹಳ್ಳಿಗಳಲ್ಲಿ ಮನೆ ಮಾಡಿರುವ ನೆರೆಹಾವಳಿ ಆತಂಕ ಇನ್ನೂ ದೂರವಾಗಿಲ್ಲ.

    ಸದ್ಯ ಆಲಮಟ್ಟಿ ಜಲಾಶಯದಿಂದ 2.70 ಲಕ್ಷ ಕ್ಯೂಸೆಕ್ ನೀರು ಒಳಹರಿವಿದ್ದು, ಮಲಪ್ರಭಾ ನದಿಯಿಂದ 5000 ಕ್ಯೂಸೆಕ್ ನೀರು ಬರುತ್ತಿದೆ. 33 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 23.53 ಟಿಎಂಸಿ ಅಡಿ ನೀರಿದೆ. ಬುಧವಾರ ಸಂಜೆ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.96 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಸದ್ಯ 24ಸಾವಿರ ಕ್ಯೂಸೆಕ್ ನೀರು ಕಡಿಮೆ ಮಾಡಲಾಗಿದೆ. ಇದು ರಾತ್ರಿ ವೇಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಾರಾಯಣಪುರ ಜಲಾಶಯದ ಎಇಇ ರಾಮನಗೌಡ ಹಳ್ಳೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts