More

    ನಾಲೆಗೆ ಹೆಚ್ಚುವರಿ ಐದು ದಿನ ನೀರು; ರೈತರ ಹೋರಾಟಕ್ಕೆ ಜಯ

    ಡಿಸಿ, ಎಸ್ಪಿ ಮನವೊಲಿಕೆ | 3 ಟಿಎಂಸಿ ಹರಿಸಲು ಒಪ್ಪಿಗೆ

    ದೇವದುರ್ಗ: ರೈತರನ್ನು ದೂರವಿಟ್ಟು ಬೆಂಗಳೂರಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರಾಧಿಕಾರದ ನೀರಾವರಿ ಸಲಹಾ ಸಮಿತಿ ಸಭೆ ಕೈಗೊಂಡ ತೀರ್ಮಾನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲೆಯ ಕೃಷಿಕರು ಹೋರಾಟದ ಕಹಳೆ ಮೊಳಗಿಸಲು ಮುಂದಾಗಿದ್ದರಿಂದ ಮೆತ್ತಗಾದ ಕೃಷ್ಣಾಭಾಗ್ಯ ಜಲನಿಗಮದ ಅಧಿಕಾರಿಗಳು ಹೆಚ್ಚುವರಿ 5 ದಿನ ಎನ್‌ಆರ್‌ಬಿ ನಾಲೆಗೆ ನೀರು ಹರಿಸಲು ಮುಂದಾಗಿದ್ದಾರೆ.

    ಮೊದಲ ಬೆಳೆಗೆ ನ.23ರಂದು ಬಂದ್‌ಮಾಡಿ ಎರಡನೇ ಬೆಳೆಗೆ ಡಿ.12ರಿಂದ ನೀರುಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ಈ ನಡುವೆ 19ದಿನ ನೀರು ಕಡಿತವಾಗಲಿದ್ದು, ಮೆಣಸಿನಕಾಯಿ, ಹತ್ತಿ, ಶೇಂಗಾ ಬೆಳೆಗೆ ನೀರಿನ ಕೊರತೆಯಾಗಲಿದೆ. ಅಲ್ಲದೆ ವಾರಬಂದಿ 10ದಿನಕ್ಕೆ ಹೆಚ್ಚಿಸಿದ್ದು, ಕೃಷಿಕರನ್ನು ಕೆರಳಿಸಿತ್ತು. ಅಧಿಕಾರಿಗಳ ಏಕಪಕ್ಷೀಯ ತೀರ್ಮಾನದಿಂದ ಕೆರಳಿದ ರೈತರು ಹಳ್ಳಿಹಳ್ಳಿಗೆ ತೆರಳಿ ಕೃಷಿಕರ ಸಭೆ ನಡೆಸಿ ದೊಡ್ಡಮಟ್ಟದ ಹೋರಾಟಕ್ಕೆ ಪ್ಲಾನ್‌ಹಾಕಿದ್ದರು. ಡಿ.1ರಂದು ನೀರು ಹರಿಸದಿದ್ದರೆ ರಾಜ್ಯಹೆದ್ದಾರಿ ಸಂಚಾರ ತಡೆ ನಡೆಸುವುದಾಗಿ ಡೆಡ್‌ಲೈನ್ ನೀಡಿದ್ದರು. ರೈತರ ಹೋರಾಟಕ್ಕೆ ಬೆದರಿದ ಅಧಿಕಾರಿಗಳು ಹೆಚ್ಚುವರಿ ನೀರುಹರಿಸಲು ಮುಂದಾಗಿದ್ದಾರೆ.

    ಐಸಿಸಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಡಿ.12ರಿಂದ 2023ರ ಮಾ.29ವರೆಗೆ 14ದಿನ ಚಾಲು, 10ದಿನ ಬಂದ್ ಪದ್ಧತಿಯಂತೆ ನಾಲೆಗೆ ನೀರು ಹರಿಯಲಿವೆ. ನ.23ರಿಂದ ಡಿ.12ರವರೆಗೆ ನೀರು ಬಂದ್ ಮಾಡುವ ಪ್ಲಾನ್‌ಅನ್ನು ಬದಲಾವಣೆ ಮಾಡಿ ನ.30 ಮಧ್ಯರಾತ್ರಿಯಿಂದ ಡಿ.5ವರೆಗೆ ಹೆಚ್ಚುವರಿ 5ದಿನ ಎಡ-ಬಲದಂಡೆ ನಾಲೆಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಬಲದಂಡೆ ನಾಲೆಗೆ ನಿತ್ಯ 1,900ಕ್ಯೂಸೆಕ್‌ನಂತೆ, ಐದುದಿನ ಎರಡೂ ನಾಲೆಗೆ ನೀರು ಹರಿಸಿದರೆ ಹೆಚ್ಚುವರಿ 3ಟಿಎಂಸಿ ನೀರು ಹೊರೆಯಾಗಲಿದೆ. ಈ ನೀರನ್ನು ಮೀಸಲಿಟ್ಟ ಹಾಗೂ ನಡುವೆ ಕಡಿಮೆ ನೀರುಬಿಟ್ಟು ಸರಿದೂಗಿಸಲು ಮುಂದಾಗಿದ್ದಾರೆ. ಎರಡೂ ಜಲಾಶಯದಲ್ಲಿ ಸದ್ಯ 112ಟಿಎಂಸಿ ಅಡಿ ನೀರಿದ್ದು, 38ಟಿಎಂಸಿ ವಿವಿಧ ಉದ್ದೇಶಕ್ಕೆ ಕಾಯ್ದಿರಿಸಿ ಉಳಿಯುವ 68 ಟಿಎಂಸಿ ವಾರಬಂದಿ ಪ್ರಕಾರ 6ದಿನ ಹರಿಸಲಾಗುತ್ತಿದೆ. ಈ ತೀರ್ಮಾನ ರೈತರ ಮೊಗದಲ್ಲಿ ನಗು ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts