More

    ಬ್ಯಾಡಗಿ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಲು ಒತ್ತಾಯ

    ಬ್ಯಾಡಗಿ: ಮೇ, ಜೂನ್‌ನಲ್ಲಿ ಮುಂಗಾರಿನ ವಾಡಿಕೆ ಮಳೆ ವಿಫಲವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಬ್ಯಾಡಗಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ತಾಲೂಕು ರೈತ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ರೈತ ಸಂಘದ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಬ್ಯಾಡಗಿ, ಕಾಗಿನೆಲೆ ಎರಡೂ ಹೋಬಳಿಗಳಲ್ಲಿ ರೈತರು ಶೇ. 10ರಷ್ಟು ಬಿತ್ತನೆ ಮಾಡಿಲ್ಲ. 32 ಸಾವಿರ ಹೆಕ್ಟೇರ್ ಜಮೀನು ಬಿತ್ತನೆಯಾಗುವ ಕ್ಷೇತ್ರವಿದೆ. ಈ ಪೈಕಿ ಎರಡ್ಮೂರು ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಡೆದಿದೆ. ಮಳೆ ಆಗದ್ದರಿಂದ ಬೀಜಗಳು ಮೊಳಕೆಯೊಡೆದಿಲ್ಲ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮಳೆ ಕೊರತೆ ವರದಿ ಸಲ್ಲಿಸಿ, ಬರಗಾಲ ಘೋಷಣೆ ಮಾಡಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

    ಶಿವಯೋಗಿ ಗಡಾದ ಮಾತನಾಡಿ, ಎರಡು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಸಿಲುಕಿದ ರೈತರಿಗೆ ಪ್ರಸಕ್ತ ಸಾಲಿನ ಮುಂಗಾರು ಕೊರತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಹಾಗೂ ಜಾನುವಾರುಗಳಿಗೆ ಮೇವು, ನೀರಿನ ಕೊರತೆಯಾಗಿದೆ. ಇತ್ತ ಮಳೆಯೂ ಇಲ್ಲ, ಅತ್ತ ಬಿತ್ತನೆಯೂ ಇಲ್ಲದೆ ರೈತರು ಆತಂಕಕ್ಕೀಡಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ತುರ್ತು ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಬಳಿಕ ತಹಸೀಲ್ದಾರ್ ಎನ್.ವಿ. ಶಿವಪ್ರಸಾದ ಅವರಿಗೆ ಮನವಿ ಸಲ್ಲಿಸಿದರು. ನಿಂಗಪ್ಪ ಮಾಗೋಡ, ಚನ್ನಬಸಪ್ಪ ಕಲಕಟ್ಟಿ, ಚಂದ್ರಶೇಖರಯ್ಯ ಚರಂತಿಮಠ, ರಾಜಣ್ಣ ವೀರನಗೌಡ್ರ, ರುದ್ರಪ್ಪ ಹೊಸಮನಿ, ಐ.ಎಚ್. ಹಾವೇರಿ, ಬಸವಂತಪ್ಪ ದಾಸರ, ಶಿವಣ್ಣ ರೆಡ್ಡಿ, ಚನ್ನಬಸಪ್ಪ ಸಂಕಣ್ಣನವರ, ಗೋಣೆಪ್ಪ ಸಂಕಣ್ಣವನರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts