More

    ಕೋವಿಡ್ ಲಸಿಕೆ ಹೆಚ್ಚಿದ ಬೇಡಿಕೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಕರೊನಾ ಮೂರನೇ ಅಲೆಯನ್ನು ಇಡೀ ಜಗತ್ತು ಕಾತರ ಹಾಗೂ ಒಂದಿಷ್ಟು ಭೀತಿಯಿಂದ ಎದುರು ನೋಡುತ್ತಿದೆ. ಭಾರಿ ಜನಜಾಗೃತಿ ನಡುವೆಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ಶೇ.55 ಜನರಿಗೆ ಮಾತ್ರ ಕೋವಿಡ್ ಲಸಿಕೆ ಪ್ರಥಮ ಡೋಸ್ ದೊರೆತಿದ್ದು, ಶೇ.45 ಜನರಿಗೆ ಇನ್ನೂ ಲಭ್ಯವಾಗಿಲ್ಲ.

    ದಕ್ಷಿಣ ಕನ್ನಡದಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 18 ಲಕ್ಷ ಜನರಿದ್ದಾರೆ, ಉಡುಪಿ ಜಿಲ್ಲೆಯಲ್ಲಿ 10 ಲಕ್ಷ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಪ್ರಥಮ ಡೋಸ್ ಲಸಿಕೆ ಪಡೆದವರ ಸಂಖ್ಯೆ ದ.ಕ.ದಲ್ಲಿ ಇನ್ನೂ ಅರ್ಧ (ಶೇ.48 ಪೂರ್ಣ) ತಲುಪಿಲ್ಲ. ಉಡುಪಿ ಜಿಲ್ಲೆಯಲ್ಲಿ ಮಾತ್ರ ಶೇ.58 ತಲುಪಿದೆ. ದ್ವಿತೀಯ ಡೋಸ್ ಪಡೆದವರ ಸಂಖ್ಯೆ ದ.ಕ.ದಲ್ಲಿ ಶೇ.15 ಆದರೆ, ಉಡುಪಿಯಲ್ಲಿ ಶೇ.21. ಈಗ ಲಸಿಕೆ ಪೂರೈಕೆಯಾಗುವ ವೇಗವೇ ಮುಂದುವರಿದರೆ ಉಭಯ ಜಿಲ್ಲೆಗಳಲ್ಲಿ ಲಸಿಕೆ ಪ್ರಥಮ ಡೋಸ್‌ಗೆ ಅರ್ಹರಾದ ಎಲ್ಲರಿಗೂ ಪೂರೈಸಲು ಇನ್ನೂ ಕನಿಷ್ಠ 4 ತಿಂಗಳು ಬೇಕು.

    ಗಡಿ ಗ್ರಾಮಗಳಲ್ಲಿ ಹೆಚ್ಚಿನ ಬೇಡಿಕೆ: ಕರಾವಳಿ ಜಿಲ್ಲೆಗಳ ಜನರಲ್ಲಿ ಲಸಿಕೆ ಪಡೆಯುವ ಅವಶ್ಯಕತೆ ಕುರಿತು ಜಾಗೃತಿ ಉಂಟಾಗಿದೆ. ಸ್ವಯಂಪ್ರೇರಿತವಾಗಿ ಆಗಮಿಸುವ ಜನರಿಗೆ ಅಗತ್ಯ ಲಸಿಕೆ ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹತ್ತಿರದ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣ ಅಧಿಕ ದಾಖಲಾದ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಆದ್ಯತೆಯಲ್ಲಿ ಲಸಿಕೆ ಒದಗಿಸುವಂತೆ ಸ್ಥಳೀಯ ಶಾಸಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಗಡಿಗ್ರಾಮಗಳಿಗೆ ಆದ್ಯತೆಯಲ್ಲಿ ಲಸಿಕೆ ಒದಗಿಸಲು ಈಗಾಗಲೇ ಇಲಾಖೆ ಕ್ರಮ ಕೈಗೊಂಡಿರುವುದಾಗಿ ಲಸಿಕೆ ನಿರ್ವಹಣೆ ವಿಭಾಗದ ನೋಡೆಲ್ ಅಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

    ಸಂಪೂರ್ಣ ಲಸಿಕಾ ಗ್ರಾಮ: ಸರ್ಕಾರ ಮತ್ತು ಸರ್ಕಾರೇತರ ಸಂಘ- ಸಂಸ್ಥೆಗಳು ಜಂಟಿಯಾಗಿ ಕರೊನಾ ತಡೆ, ನಿಯಂತ್ರಣ ಮತ್ತು ನಿರ್ವಹಣೆಗೆ ಕೈಗೊಂಡ ಕಾರ್ಯಕ್ರಮಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟ ಅಂತಾರಾಜ್ಯ ಗಡಿ ಭಾಗದಲ್ಲಿರುವ ಬಾಳೆಪುಣಿ ಗ್ರಾಮ ಪಂಚಾಯಿತಿಯನ್ನು ಸಂಪೂರ್ಣ ಲಸಿಕಾ ಗ್ರಾಮವಾಗಿ ರೂಪಿಸುವ ಪ್ರಯತ್ನ ನಡೆಯುತ್ತಿವೆ.
    ಕೈರಂಗಳ ಹಾಗೂ ಬಾಳೆಪುಣಿ ಎರಡು ಗ್ರಾಮಗಳು ಇರುವ ಬಾಳೆಪುಣಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಮಾದರಿ ‘ಸಂಪೂರ್ಣ ಲಸಿಕಾ ಗ್ರಾಮ’ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅಗತ್ಯ 4 ಸಾವಿರ ಡೋಸ್ ಲಸಿಕೆ ಒದಗಿಸುವಂತೆ ಲಸಿಕಾ ಅಭಿಯಾನದಲ್ಲಿ ಕೈಜೋಡಿಸಲು ಸರ್ಕಾರ ನೇಮಿಸಿರುವ ಎನ್‌ಜಿಒ ಜನಶಿಕ್ಷಣ ಟ್ರಸ್ಟ್ ಸರ್ಕಾರಕ್ಕೆ ಪತ್ರ ಬರೆದಿದೆ.

    ಕೋವಿಡ್ ನಿರೋಧಕ ಲಸಿಕೆ ಲೆಕ್ಕಾಚಾರ: 
    ಜಿಲ್ಲೆ ದಕ್ಷಿಣ ಕನ್ನಡ ಉಡುಪಿ
    ಅರ್ಹರು 18 ಲಕ್ಷ 10 ಲಕ್ಷ
    1ನೇ ಡೋಸ್ 9,63,051 5,79,998
    ಕೊಡಲು ಬಾಕಿ 8.3 ಲಕ್ಷ 4.5 ಲಕ್ಷ
    2ನೇ ಡೋಸ್ 2,98,426 2,12,059
    ಕೊಡಲು ಬಾಕಿ 15 ಲಕ್ಷ 8 ಲಕ್ಷ

    ಕೋವಿಡ್ ಲಸಿಕೆ ಕಾರ್ಯಕ್ರಮ ಪೂರೈಕೆಗೆ ತಕ್ಕಂತೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೇರಳ ಮತ್ತು ಕರ್ನಾಟಕ ಗಡಿ ಭಾಗದ ಜಿಲ್ಲೆಯ ಗ್ರಾಮಗಳ ಜನರಿಗೆ ಆದ್ಯತೆಯಲ್ಲಿ ಲಸಿಕೆ ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

    ಡಾ.ಬಿ.ವಿ.ರಾಜೇಶ್, ಕೋವಿಡ್ ನೋಡೆಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts