More

    ಸರ್ಕಾರಿ ಬಸ್‌ಗೆ ಹೆಚ್ಚಿದ ಬೇಡಿಕೆ, ಜನಸಾಮಾನ್ಯರಿಗೆ ಖಾಸಗಿಯಲ್ಲಿ ದುಬಾರಿ ಟಿಕೆಟ್ ದರ

    ಉಳ್ಳಾಲ: ಕರೊನಾ ಸಂಕಷ್ಟ ಸಂದರ್ಭದಲ್ಲೇ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ. ಒಂದು ನಿರ್ದಿಷ್ಟ ಜಾಗಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಟಿಕೆಟ್ ದರದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು ಜನಸಾಮಾನ್ಯರಿಗೆ ಸರ್ಕಾರಿ ಬಸ್ ಪ್ರಯಾಣವೇ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡುತ್ತಿದೆ.

    ಈ ಹಿಂದೆ ಖಾಸಗಿ ಬಸ್ ದರ ಏರಿಸುವ ಮೊದಲು ಸಂಘ-ಸಂಸ್ಥೆಗಳ, ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತಿತ್ತು. ಅಲ್ಲಿ ದರ ಏರಿಕೆಗೆ ಒಪ್ಪಿಗೆ ಸಿಗುತ್ತಿರಲಿಲ್ಲ. ಆದರೂ ಟಿಕೆಟ್ ಮತ್ತು ಪ್ರಯಾಣದ ದೂರ ಆಧಾರದಲ್ಲಿ ಶೇ.10, 15ರಷ್ಟು ಮಾತ್ರ ಹೆಚ್ಚಳವಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಹಾಗಾಗಿಲ್ಲ. ಲಾಕ್‌ಡೌನ್ ನೆಪವನ್ನೇ ಮುಂದಿಟ್ಟು ಪ್ರಯಾಣ ದರ ಏರಿಸಲಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಶೇ.50ನ್ನೂ ಮೀರಿದೆ. ಲಾಕ್‌ಡೌನ್ ಮುಗಿಸಿ ಕೆಲಸಕ್ಕೆ ತೆರಳಿದ ಕಾರ್ಮಿಕರು ಬಸ್ ಹತ್ತಿದಾಗಲೇ ಶಾಕ್ ನೀಡಿದ್ದು ಟಿಕೆಟ್ ದರ. ಕನಿಷ್ಠ ಎಂಟು ರೂಪಾಯಿಯಿದ್ದ ದರ 12ಕ್ಕೇರಿತ್ತು. ಉದಾಹರಣೆಗೆ ಮುಡಿಪುವಿನಿಂದ ಮಂಗಳೂರಿಗೆ ಖಾಸಗಿ ಬಸ್ ಕಂಡೆಕ್ಟರ್ 33 ರೂ. ಟಿಕೆಟ್ ಕೊಡುತ್ತಿದ್ದರೆ, ಅದೇ ಪ್ರಯಾಣಿಕ್ಕೆ ಸರ್ಕಾರಿ ಬಸ್‌ನಲ್ಲಿ 19 ರೂ. ತೊಕ್ಕೊಟ್ಟಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿಯಲ್ಲಿ 11 ರೂ, ಖಾಸಗಿಯಲ್ಲಿ 18. ಯಾವುದೇ ಪ್ರದೇಶಕ್ಕೂ ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಶೇ.60-70ರಷ್ಟು ವ್ಯತ್ಯಾಸವಿದೆ.

    ಕರೊನಾ ಸಂದರ್ಭದಲ್ಲೇ ನಾಟೆಕಲ್‌ನಿಂದ ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರ್ಕಾರಿ ಬಸ್ ಬಂದಿದೆ. ಇದರಿಂದ ಮಂಜನಾಡಿ, ತೌಡುಗೋಳಿ ಕ್ರಾಸ್, ಹೂಹಾಕುವಕಲ್ಲು ಇತ್ಯಾದಿ ಊರಿನವರಿಗೂ ಪ್ರಯೋಜನವಾಗಿದೆ. ಇಲ್ಲಿಗೆ ಸರ್ಕಾರಿ ಬಸ್ ಬೇಕೆನ್ನುವ ಹೋರಾಟ 2012ರಲ್ಲೇ ಆರಂಭವಾಗಿದ್ದು, ಖಾಸಗಿ ಬಸ್ ಮಾಲೀಕರು ನ್ಯಾಯಾಲಯದಿಂದ ತಡೆ ತಂದಿದ್ದರು. ಈಗ ಮೊಂಟೆಪದವು ಭಾಗದ ಜನರೂ ಸರ್ಕಾರಿ ಬಸ್ ನೋಡಿದ್ದಾರೆ. ಪಾವೂರು ಗ್ರಾಮಕ್ಕೂ ಸರ್ಕಾರಿ ಬಸ್ ಬೇಕೆನ್ನುವ ಬೇಡಿಕೆಗೆ ಬಲ ಬಂದಿದೆ.

    ಕೆಎಸ್‌ಆರ್‌ಟಿಸಿ ಇದ್ದಲ್ಲಿ ಪ್ರಯಾಣಿಕರು ಖುಷ್: ಕರೊನಾ ಸಂದರ್ಭ ಟಿಕೆಟ್ ದರ ಏರಿಕೆ ಆಗಿದ್ದನ್ನು ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹೋರಾಟ ನಡೆಸುತ್ತಿವೆ. ಮತ್ತೊಂದೆಡೆ ಜನ ಖಾಸಗಿ ಬಸ್ ಪ್ರಯಾಣಕ್ಕೆ ವಿಪರೀತ ದರ ತೆತ್ತು ಕಂಗಾಲಾಗಿದ್ದಾರೆ. ಉಳ್ಳಾಲ ಭಾಗದಲ್ಲಿ ಹರೇಕಳ, ಅಂಬ್ಲಮೊಗರು, ಬೋಳಿಯಾರ್, ಮುಡಿಪು, ಕಿನ್ಯ ಭಾಗಕ್ಕೆ ಸರ್ಕಾರಿ ಬಸ್‌ಗಳಿವೆ. ಆದರೆ ಪಾವೂರು ಗ್ರಾಮಕ್ಕೆ ಇನ್ನೂ ಈ ವ್ಯವಸ್ಥೆ ಸಿಕ್ಕಿಲ್ಲ.

    ಸ್ಥಳೀಯವಾಗಿ 25ರಷ್ಟು ಕೆಎಸ್ಸಾರ್ಟಿಸಿ ಬಸ್ಸುಗಳು ಸಂಚರಿಸುತ್ತಿವೆ, ಕೆಲವು ಕಡೆ ಬಸ್‌ಗಳು ಬೇಕೆನ್ನುವ ಬೇಡಿಕೆ ಸದ್ಯಕ್ಕಿಲ್ಲ. ನಮ್ಮಲ್ಲಿರುವಷ್ಟು ಬಸ್ಸುಗಳು ಓಡಾಡುತ್ತಿವೆ. ಆದರೆ ಬಸ್ ಮಂಗಳೂರಿಗೆ ಸಂಚರಿಸಬೇಕಾದರೆ ನಮಗೆ ಆರ್‌ಟಿಒದಿಂದ ಪರವಾನಗಿ ಬೇಕಾಗುತ್ತದೆ.
    ಕಮಲ್ ಕುಮಾರ್
    ಅಧಿಕಾರಿ, ವಲಯ ಕೆಎಸ್‌ಆರ್‌ಟಿಸಿ ಸಂಚಾರಿ ವಿಭಾಗ

    ಪಾವೂರು ಗ್ರಾಮದ ಇನೋಳಿಗೆ ಸರ್ಕಾರಿ ಬಸ್ ಬೇಕೆಂಬ ಬೇಡಿಕೆ ಹಿಂದೆಯೇ ಪಂಚಾಯಿತಿಯಿಂದ ಕೆಎಸ್‌ಆರ್‌ಟಿಸಿಗೆ ಸಲ್ಲಿಸಲಾಗಿದೆ. ಈಗ ಖಾಸಗಿ ಬಸ್ ದರ ದುಬಾರಿ ಆಗಿರುವುದರಿಂದ ಜನರ ಬೇಡಿಕೆಯಂತೆ ನಿರ್ಣಯ ಕೈಗೊಳ್ಳಲಾಗಿದ್ದು, ಮತ್ತೆ ಮನವಿ ಸಲ್ಲಿಸಲಾಗುವುದು.
    ವಲೇರಿಯನ್ ಡಿಸೋಜ
    ಸದಸ್ಯ, ಪಾವೂರು ಗ್ರಾಪಂ

    ಪ್ರಸ್ತುತ ದಿನಗಳಲ್ಲಿ ಲಾಕ್‌ಡೌನ್‌ನಿಂದಾಗಿ ಜನರಿಗೆ ಕೆಲಸವೂ ಕಡಿಮೆಯಾಗಿದೆ. ಇದೇ ವೇಳೆ ಖಾಸಗಿ ಬಸ್ ದರ ಏರಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊಂಟೆಪದವಿನಿಂದ ಮುಡಿಪುವಿಗೆ ಸರ್ಕಾರಿ ಬಸ್ ಬಂದಿರುವುದು ಒಂದಷ್ಟು ನೆಮ್ಮದಿ ತಂದಿದೆ, ಇನ್ನಷ್ಟು ಸರ್ಕಾರಿ ಬಸ್ ಬರಬೇಕು.
    ಇಸ್ಮಾಯಿಲ್ ಬಾಳೇಪುಣಿ
    ಸಮಾಜ ಸೇವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts