More

    ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ: ಕಂಡಲ್ಲಿ ಗುಂಡಿಕ್ಕಲು ಆದೇಶ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪರ-ವಿರೋಧ ಬಣದಿಂದ ಉಂಟಾದ ಗಲಭೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಸಾವಿನ ಸಂಖ್ಯೆ 13ಕ್ಕೇರಿದೆ. ವಾತಾವರಣ ಇನ್ನು ಪ್ರಕ್ಷುಬ್ಧವಾಗಿದ್ದು ಈಶಾನ್ಯ ದೆಹಲಿ ಜಿಲ್ಲೆಗಳಲ್ಲಿ ಗಲಭೆಕೋರರು ಕಂಡಲ್ಲಿ ಗುಂಡಿಕ್ಕಲು ಆದೇಶವನ್ನು ಹೊರಡಿಸಲಾಗಿದೆ.

    ಈಶಾನ್ಯ ದೆಹಲಿಯ ಚಾಂದ್​ ಬಾಘ್​ ಮತ್ತು ಭಜನ್​ಪುರ ಸೇರಿದಂತೆ ಅನೇಕ ಭಾಗಗಳಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಕಲ್ಲು ತೂರಾಟ, ಅಂಗಡಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವುದು ಮುಂದುವರಿದಿರುವ ಹಿನ್ನೆಲೆಯಲ್ಲಿ ಯುಮುನಾ ವಿಹಾರ ಏರಿಯಾದ ದೆಹಲಿ ಪೊಲೀಸ್​ ವರಿಷ್ಠಾಧಿಕಾರಿ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ.

    ಮೌಜಾಪುರ, ಜಫ್ರಾಬಾದ್​, ಚಾಂದ್​ಬಾಘ್​ ಮತ್ತು ಕರ್ವಾಲ್​ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೆ ಈಶಾನ್ಯ ದೆಹಲಿ ಭಾಗದಲ್ಲಿ ಜಾರಿಯಲ್ಲಿರುವ 144 ಸೆಕ್ಷನ್​ನ್ನು ಮಾರ್ಚ್​ 24ರವರೆಗೆ ವಿಸ್ತರಿಸಲಾಗಿದೆ.

    ಗಲಭೆಯಲ್ಲಿ 180 ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 70 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 56 ಪೊಲೀಸ್​ ಸಿಬ್ಬಂದಿಯೂ ಸಹ ಗಾಯಗೊಂಡಿದ್ದಾರೆ. ದೆಹಲಿಯ ಹಲವು ಭಾಗಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್​ ಸಿಬ್ಬಂದಿ ಮತ್ತು ಇತರರಿಗೆ ಸಿಎಂ ಕೇಜ್ರಿವಾಲ್​ ಸಂತಾಪ ಸೂಚಿಸಿದ್ದಾರೆ.

    ಪೌರತ್ವ ತಿದ್ದಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ಇಂದು ಗೃಹ ಸಚಿಹ ಅಮಿತ್​ ಷಾ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಮತ್ತು ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಲ್​ ಅವರೊಂದಿಗೆ ಸಭೆ ನಡೆಯಿತು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಆಗಮನ ವೇಳೆಯೇ ಕೆಲವರು ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಸೃಷ್ಟಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts