More

    ವ್ಯವಹಾರ ಎಂಬುದು ಟೀಂ ವರ್ಕ್ ಎಂಬುದು ಬಾಟಾ ವಿಚಾರದಲ್ಲಿ ನಿಜವಾಯಿತು!

    ಇದು ನಮಗೆ ಆಪ್ತ ಎನ್ನಿಸುವ ಬ್ರ್ಯಾಂಡ್ ಒಂದರ ಕಥೆ. ಬೇರೆ ದೇಶದ್ದಾದರೂ ಶೂ ಅಥವಾ ಚಪ್ಪಲಿ ಎಂದರೆ ಥಟ್ಟನೇ ನೆನಪಿಗೆ ಬರುವ ಹೆಸರು ಬಾಟಾ! ಈ ಕಂಪನಿ ಶುರುವಾಗಿದ್ದು ಬಡ ಚಮ್ಮಾರನ ಮನೆಯಲ್ಲಿ! ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಈ ಕಂಪನಿಯನ್ನು ಎತ್ತರಕ್ಕೆ ತಲುಪಿಸಿದ ವ್ಯಕ್ತಿ ಝೆಕೊಸ್ಲೋವಾಕಿಯಾದ ಥಾಮಸ್ ಬಾಟಾ!

    ಚಪ್ಪಲಿ ತಯಾರಿಕೆಗೆ ಬೇಕಾದ ಕೌಶಲಗಳನ್ನು ಥಾಮಸ್ ಚಿಕ್ಕಂದಿನಲ್ಲೇ ತಂದೆಯಿಂದ ಕಲಿತುಕೊಂಡಿದ್ದ. ಚಪ್ಪಲಿ ತಯಾರಿಕೆಯಾಗಲೀ, ರಿಪೇರಿಯಾಗಲೀ, ಪಾಲಿಶ್ ಮಾಡುವುದಾಗಲೀ ಎಲ್ಲದರಲ್ಲೂ ಏಕಾಗ್ರತೆಯಿಂದ, ಸಮಾಧಾನ ಚಿತ್ತದಿಂದ, ಶ್ರಮವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಅರಿತುಕೊಂಡ.

    ವ್ಯವಹಾರ ಎಂಬುದು ಟೀಂ ವರ್ಕ್ ಎಂಬುದು ಬಾಟಾ ವಿಚಾರದಲ್ಲಿ ನಿಜವಾಯಿತು!1894 ಆಗಸ್ಟ್ 24 ರಂದು ಝೆಕೊಸ್ಲೋವಾಕಿಯಾದ ಜಲಿನ್​ನಲ್ಲಿ ಹದಿನೆಂಟರ ಹರಯದ ಥಾಮಸ್ ತನ್ನ ಸಹೋದರ ಆಂಟೊನಿನ್ ಮತ್ತು ಸಹೋದರಿ ಆನಾ ಜತೆ ಸೇರಿ ಚಪ್ಪಲಿ ತಯಾರಿಕೆ ಆರಂಭಿಸಿದ. ಹತ್ತು ಉದ್ಯೋಗಿಗಳಿಂದ ಶುರುವಾದ ಕಂಪನಿಯಿದು. ಕಂಪನಿ ಆರಂಭಿಸಿದ ವರ್ಷದಲ್ಲೇ ಥಾಮಸ್ ಸಾಲದಲ್ಲಿ ಮುಳುಗಿದ. ಹಾಗಾಗಿ ಚರ್ಮದ ಬದಲು ಕ್ಯಾನ್​ವಾಸ್ ಉಪಯೋಗಿಸಿ ಶೂ ತಯಾರಿಸತೊಡಗಿದ. ಅನಿವಾರ್ಯವಾಗಿ ಕೈಗೊಂಡ ತೀರ್ಮಾನ ಲಾಭದಾಯಕವಾಯಿತು! ಚರ್ಮಕ್ಕಿಂತ ಕ್ಯಾನ್​ವಾಸ್ ಬೆಲೆ ಕಡಿಮೆ ಇದ್ದುದರಿಂದ ಇವರು ತಯಾರಿಸಿದ ಶೂಗಳು ಬಹು ಜನಪ್ರಿಯತೆ ಹೊಂದಿದವು! ಸಾಲದಲ್ಲಿದ್ದ ಕಂಪನಿ ಲಾಭದೆಡೆಗೆ ಹೊರಳಿತು!

    ಉದ್ಯಮದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಥಾಮಸ್ 1904ರಲ್ಲಿ ತನ್ನ ಕೆಲವು ಉದ್ಯೋಗಿಗಳ ಜತೆ ಅಮೆರಿಕಕ್ಕೆ ತೆರಳಿದ. ಆರುತಿಂಗಳು ತರಬೇತಿ ಪಡೆದು ಮರಳಿದ ನಂತರ ಕಂಪನಿ ಹೊಸ ರೂಪ ಪಡೆಯಿತು. ಯೂರೋಪಿನಲ್ಲೇ ಮೊದಲ ಬಾರಿ ಉದ್ಯೋಗಸ್ಥರಿಗಾಗಿ ಬಾಟೋಕಿ(Batovky) ಎಂಬ ಸರಳ, ಆಕರ್ಷಕ, ಹಗುರ ಹಾಗೂ ಕಡಿಮೆ ಬೆಲೆಯ ಶೂಗಳನ್ನು ದೊಡ್ಡ ಪ್ರಮಾಣದಲ್ಲಿ ಪರಿಚಯಿಸಿದ. ಈ ಶೂಗಳು ಎಷ್ಟು ಜನಪ್ರಿಯವಾದವೆಂದರೆ ಕಂಪನಿ ಶರವೇಗದಲ್ಲಿ ಮುನ್ನಡೆಯಲಾರಂಭಿಸಿತು. ಆದರೆ ಅದೇ ವೇಳೆಗೆ ಸಹೋದರ ಮೃತಪಟ್ಟ. ಸಹೋದರಿ ವಿವಾಹವಾಗಿ ಪತಿಗೃಹ ಸೇರಿದಳು. ಏಕಾಂಗಿಯಾದ ಥಾಮಸ್! ಆದರೆ ಗುರಿ ತಲುಪಲು ನಡಿಗೆ ಶುರು ಮಾಡಿದ ಮೇಲೆ ಮಧ್ಯೆ ನಿಲ್ಲುವವರ ಪೈಕಿ ಆಗಿರಲಿಲ್ಲ ಥಾಮಸ್! ತನ್ನ ಕಿರಿಯ ಸಹೋದರರನ್ನು ವ್ಯವಹಾರದಲ್ಲಿ ಸೇರಿಸಿಕೊಂಡ. ಆರಂಭದಲ್ಲಿ ಹತ್ತು ಮಂದಿಯಿದ್ದ ಉದ್ಯೋಗಿಗಳು 1912ರಲ್ಲಿ ಆರುನೂರಕ್ಕಿಂತ ಜಾಸ್ತಿಯಾಗಿದ್ದರು. 1914ರಲ್ಲಿ ವಿಶ್ವಯುದ್ಧ ಪ್ರಾರಂಭವಾದಾಗ ಹಗುರ ಮತ್ತು ಆರಾಮದಾಯಕವಾದ ಈ ಕಂಪನಿಯ ಶೂಗಳಿಗೆ ಸೈನ್ಯದಿಂದ ಬೇಡಿಕೆ ಬಂದಿತು. 1918ರಲ್ಲಿ ಯುದ್ಧ ಮುಗಿಯುವವರೆಗೆ ಕಂಪನಿ ಎಷ್ಟು ಶೂಗಳನ್ನು ತಯಾರಿಸಿತೆಂದರೆ ಉದ್ಯೋಗಿಗಳ ಸಂಖ್ಯೆ ಆರುನೂರರಿಂದ ಆರು ಸಾವಿರಕ್ಕೇರಿತು. ಬೇರೆಬೇರೆ ನಗರ, ಪಟ್ಟಣಗಳಲ್ಲಿ ಮಳಿಗೆಗಳು ಆರಂಭವಾದವು.

    ವಿಶ್ವಯುದ್ಧದ ನಂತರದ ಆರ್ಥಿಕ ಕುಸಿತ ಈ ಕಂಪನಿಯನ್ನೂ ಬಿಡಲಿಲ್ಲ. ಅದರಲ್ಲೂ 1918ರಲ್ಲಿ ಸ್ವಾತಂತ್ರ್ಯ ಗಳಿಸಿದ ಹೊಸ ದೇಶವಾಗಿದ್ದ ಝೆಕೊಸ್ಲೋವಾಕಿಯದ (ಹಲವಾರು ಏಳುಬೀಳುಗಳನ್ನು ಕಂಡ ಈ ದೇಶ 1993ರಲ್ಲಿ ಝೆಕ್ ಗಣರಾಜ್ಯ ಮತ್ತು ಸ್ಲೋವಾಕಿಯಾ ಗಣರಾಜ್ಯ ಎಂಬ ಎರಡು ದೇಶಗಳಾಗಿ ವಿಭಜನೆ ಹೊಂದಿತು) ಹಣದ ಮೌಲ್ಯವಂತೂ ಪಾತಾಳ ಕಂಡಿತ್ತು. ಆದರೆ ಆಗಲೇ ಹೇಳಿದಂತೆ ಥಾಮಸ್ ಯಾವುದಕ್ಕೂ ಒತ್ತಡ ಹೇರಿಕೊಳ್ಳುವವರಲ್ಲ. ಸಮಸ್ಯೆ ಬಂದಾಗ ಪರಿಹಾರ ಹೇಗೆ ಕಂಡುಕೊಳ್ಳಬೇಕೆಂದು ಯೋಚಿಸುವವರು. ತಮ್ಮ ಕಂಪನಿಯ ಶೂಗಳಿಗೆ ‘50 ಶೇಕಡ ರಿಯಾಯಿತಿ ಮಾರಾಟ’ ಎಂದು ಘೊಷಿಸಿದರು. ಇದು ಬಹುದೊಡ್ಡ ತೀರ್ವನವಾಗಿತ್ತು. ಉದ್ಯೋಗಿಗಳೂ ಥಾಮಸ್​ಗೆ ತಮ್ಮ ಸಂಬಳದಲ್ಲಿ ನಲವತ್ತು ಶೇಕಡ ಕಡಿಮೆ ಮಾಡಲು ಒಪ್ಪಿಗೆ ನೀಡುವುದರ ಮೂಲಕ ಬೆಂಬಲವಾಗಿ ನಿಂತರು! ವ್ಯವಹಾರ ಎಂಬುದು ಟೀಂ ವರ್ಕ್ ಎಂಬುದು ಬಾಟಾ ವಿಚಾರದಲ್ಲಿ ನಿಜವಾಯಿತು!

    ಬೇರೆ ಹಲವಾರು ಕಂಪನಿಗಳೆಲ್ಲ ಬಾಗಿಲು ಮುಚ್ಚುವ ಸ್ಥಿತಿಗೆ ಬಂದರೆ ಬಾಟಾ ಶೂಗಳಿಗೆ ಹೆಚ್ಚು ಬೇಡಿಕೆ ಬಂತು. ಅಲ್ಲಿಂದ ಬಾಟಾ ಎಂದಿಗೂ ಹಿಂದಿರುಗಿ ನೋಡಲಿಲ್ಲ. ಜಗತ್ತಿನ ಟಾಪ್ ಫುಟ್​ವೇರ್ ಕಂಪನಿಗಳಲ್ಲಿ ಒಂದಾಯಿತು. ಜಗತ್ತಿನಾದ್ಯಂತ ತನ್ನ ಸಾವಿರಾರು ಶಾಖೆಗಳನ್ನು ಹೊಂದಿ ಜನಪ್ರಿಯ ಬಹುರಾಷ್ಟ್ರೀಯ ಕಂಪನಿಯಾಗಿ ಮಾರ್ಪಟ್ಟಿತು! ಈ ಕಂಪನಿಯ ಮುಖ್ಯ ಕಚೇರಿ ಈಗ ಸ್ವಿಟ್ಸರ್​ಲ್ಯಾಂಡ್​ನಲ್ಲಿದೆ.

    1932ರಲ್ಲಿ ಥಾಮಸ್ ಬಾಟಾ ವಿಮಾನ ಅಪಘಾತವೊಂದರಲ್ಲಿ ನಿಧನರಾದರು. ಆದರೆ ತಮ್ಮ ಕಥೆಯಿಂದ ಅಸಂಖ್ಯ ಮಂದಿಗೆ ಸ್ಪೂರ್ತಿಯ ಸೆಲೆಯಾದರು! ಆ ಸಂದರ್ಭದಲ್ಲಿ ಅವರ ಮಗ ಜೂನಿಯರ್ ಥಾಮಸ್ ಮತ್ತು ಮಲಸಹೋದರ ಜಾನ್ ಅಂಟಾನಿನ್ ಈ ವ್ಯವಹಾರ ಮುಂದುವರಿಸಿದರು.

    ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿ ಝೆಕೊಸ್ಲೋವಾಕಿಯಾವನ್ನು ಆಕ್ರಮಿಸಿತು. ಅದಕ್ಕೂ ಮುನ್ನ ತನ್ನ ಹಲವಾರು ಯಹೂದಿ ಉದ್ಯೋಗಿಗಳನ್ನು ತಮ್ಮ ಕಂಪನಿಯ ಬೇರೆಬೇರೆ ಶಾಖೆಗಳಲ್ಲಿ ಕೆಲಸ ಮಾಡಲು ಜಾನ್ ಅಂಟಾನಿನ್ ಕಳಿಸಿಬಿಟ್ಟಿದ್ದರು. ಜೂನಿಯರ್ ಥಾಮಸ್​ರನ್ನು ಕೂಡ ನೂರು ಕುಟುಂಬಗಳೊಡನೆ ಕೆನಡಾಕ್ಕೆ ಕಳಿಸಿದರು. ಸ್ವಲ್ಪಸಮಯ ಅಮೆರಿಕದಲ್ಲಿ ಅವರು ಇರಬೇಕಾಯಿತು. ಜರ್ಮನಿಯ ಸೇನೆ ಕಂಪನಿಯನ್ನು ವಶಪಡಿಸಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಜಾನ್ ಅಂಟಾನಿನ್. ಕಂಪನಿಯನ್ನು ಉಳಿಸಿಕೊಳ್ಳಲು, ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಮುಸುಲೋನಿಯ ಸೈನ್ಯಕ್ಕೆ ಶೂ ಒದಗಿಸಿಕೊಡುವ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.

    ಹಾಗಾಗಿ ಯುದ್ಧಾನಂತರ ನಾಝಿಗಳ ವಿರುದ್ಧದ ಹೋರಾಟದಲ್ಲಿ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಸ್ವದೇಶದಲ್ಲಿ ವಿಚಾರಣೆ ಎದುರಿಸಬೇಕಾಯಿತು. ಗಡೀಪಾರಿನ ಶಿಕ್ಷೆಯೂ ಆಗಿ ಬ್ರೆಜಿಲ್​ನಲ್ಲಿಯೇ ನೆಲೆನಿಲ್ಲಬೇಕಾಯಿತು. ಜಾನ್ ಅಂಟಾರಿನ್ ಸ್ಥಾಪಿಸಿದ ಬಾಟಾ ಹೆಸರಿನ ಐದು ನಗರಗಳೂ, ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳೂ ಬ್ರೆಜಿಲ್​ನಲ್ಲಿದ್ದರು. ಅವರ ಸ್ವದೇಶದ ಆಸ್ತಿಯೆಲ್ಲವನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು. 1965ರಲ್ಲಿ ಕೊನೆಯುಸಿರು ಎಳೆಯುವವರೆಗೂ ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ ಜಾನ್ ‘ದ ಕಿಂಗ್ ಆಫ್ ದ ಶೂಸ್’ ಎಂದೇ ಕರೆಸಿಕೊಂಡವರು! ಆದರೆ ಅವರ ಸಾವಿನ ನಾಲ್ಕು ದಶಕಗಳ ನಂತರ(2007) ಝೆಕ್ ಸರ್ಕಾರ ಫ್ಯಾಸಿಸ್ಟರಿಗೆ ಸಹಾಯ ಮಾಡಿದವರ ಪಟ್ಟಿಯಲ್ಲಿನ ಜಾನ್ ಅಂಟಾನಿನ್ ಹೆಸರನ್ನು ತೆಗೆದು ಹಾಕಿತು. ಶಿಕ್ಷೆಯಾದ ಅರವತ್ತು ವರ್ಷಗಳ ನಂತರ ನ್ಯಾಯ ಸಿಕ್ಕಿತು! ನಿಜ ಹೇಳಬೇಕೆಂದರೆ ಜಾನ್ ಗಡೀಪಾರಾಗಿದ್ದ ಝೆಕೊಸ್ಲೋವಾಕಿಯಾ ಸರ್ಕಾರಕ್ಕೇ ಗುಟ್ಟಾಗಿ ಸಹಾಯ ಮಾಡುತ್ತಿದ್ದರು. ಬಾಟಾ ಬೆಳವಣಿಗೆಯಿಂದ ಅಸೂಯೆ ಪಟ್ಟವರ ಕೈವಾಡ ಆ ವಿಚಾರಣೆಯಲ್ಲಿತ್ತೆಂದು ಆನಂತರ ರ್ಚಚಿಸಲ್ಪಟ್ಟ ಸಂಗತಿಯಾಯಿತು.

    2ನೇ ವಿಶ್ವಯುದ್ಧದ ನಂತರ ಝೆಕೊಸ್ಲೋವಾಕಿಯಾ, ಪಶ್ಚಿಮ ಜರ್ಮನಿ, ಪೋಲ್ಯಾಂಡ್ ಮತ್ತು ಯುಗೊಸ್ಲಾವಿಯಾ ದೇಶಗಳು ತಮ್ಮ ತಮ್ಮ ದೇಶದಲ್ಲಿದ್ದ ಬಾಟಾ ಕಂಪನಿಗಳನ್ನು ವಶಪಡಿಸಿಕೊಂಡು ರಾಷ್ಟ್ರೀಕರಣಗೊಳಿಸಿದವು! ಕೆನಡಾದಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಜೂನಿಯರ್ ಥಾಮಸ್ ಕೆಲವು ಸಂಬಂಧಿಗಳೊಡನೆ ಸೇರಿ ಬ್ರಿಟನ್, ಕೆನಡಾದ ಕಂಪನಿಗಳ ಮೂಲಕ ಹೊಸದಾಗಿ ಮತ್ತೆ ವ್ಯವಹಾರ ಆರಂಭಿಸಬೇಕಾಯಿತು! ಅಲ್ಲಿಂದ ಮತ್ತೆ ಇದು ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದದ್ದು ಗಮನಾರ್ಹ ಸಂಗತಿ. 1989ರಲ್ಲಿ ಝೆಕೊಸ್ಲೋವಾಕಿಯಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ಪತನವಾದ ಮೇಲೆ ಥಾಮಸ್ ತಾಯ್ನಾಡಿಗೆ ಮರಳಿದರು, ಸಾವಿರಾರು ಮಂದಿ ಅವರನ್ನು ಸ್ವಾಗತಿಸಲು ನೆರೆದಿದ್ದರು. ಸ್ಥಾಪಕ ಥಾಮಸ್ ಬಾಟಾ ಹೆಸರಿನಲ್ಲಿ ಝೆಕ್ ಗಣರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯವೂ ಇದೆ.

    ಬಾಟಾ ಅವರು ಕಚ್ಚಾವಸ್ತುಗಳಿಗಾಗಿ ಕೊಲ್ಕತ್ತಕ್ಕೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಭಾರತದಲ್ಲಿ ಒಂದೂ ಶೂ ತಯಾರಿಕಾ ಕಂಪನಿ ಇರಲಿಲ್ಲ. ಜಪಾನ್​ನಿಂದ ಶೂಗಳು ಆಮದಾಗುತ್ತಿದ್ದವು. ಹಾಗಾಗಿ ಭಾರತದಲ್ಲಿ ವ್ಯವಹಾರ ಶುರು ಮಾಡಲು ಥಾಮಸ್ ನಿರ್ಧರಿಸಿದರು. ಪಾಟ್ನಾದಲ್ಲಿ ಚರ್ಮದ ಕಾರ್ಖಾನೆಯನ್ನೂ ಸ್ಥಾಪಿಸಿದರು. ಆ ಪ್ರದೇಶ ‘ಬಾಟಾಗಂಜ್’ ಎಂದೇ ಕರೆಸಿಕೊಳ್ಳಲ್ಪಡುತ್ತದೆ. ಬಾಟಾ ಕಂಪನಿಯ ಕಾರ್ಖಾನೆಯಿಂದ, ಅಲ್ಲಿನ ಸಾವಿರಾರು ನೌಕರರ ವಾಸದಿಂದ ಕೊಲ್ಕತ್ತ ಹತ್ತಿರ ಬಾಟಾನಗರ ಎಂಬ ಊರೇ ನಿರ್ವಿುಸಲ್ಪಟ್ಟಿತು! ಜಗತ್ತಿನಾದ್ಯಂತ ಎಪ್ಪತ್ತಕ್ಕೂ ಅಧಿಕ ದೇಶಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ಈ ಕಂಪನಿ ಭಾರತದಲ್ಲಿ ಸಾವಿರದ ಮುನ್ನೂರಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ!

    1970ರ ಸುಮಾರಿಗೆ ಈ ಕಂಪನಿ ತಯಾರಿಸಿದ ಬಿಳಿಯ ಕ್ಯಾನ್​ವಾಸ್ ಶೂಗಳು ಜಗತ್ತಿನಾದ್ಯಂತ ಜನಪ್ರಿಯವಾದವು. ಶಾಲೆಯ ಮಕ್ಕಳು ಹಾಕುವ ಬಿಳಿಯ ಶೂಗಳು ನೆನಪಾದವೇ? ಹೌದು, ಅದನ್ನು ಮೊದಲು ತಯಾರಿಸಿದ್ದು ಬಾಟಾ. 2004ರಲ್ಲಿ ಬಾಟಾ ಜಗತ್ತಿನ ಅತ್ಯಂತ ದೊಡ್ಡ ಶೂ ಉತ್ಪಾದಕ ಹಾಗೂ ರೀಟೇಲರ್ ಕಂಪನಿಯೆಂದು ಗಿನ್ನಿಸ್ ದಾಖಲೆಗೆ ಕೂಡ ಭಾಜನವಾಯಿತು! ಎಲ್ಲರಂತೆ ವ್ಯವಹಾರಸ್ಥರಿಗೂ ಇದು ಸಂಕಷ್ಟದ ಕರೊನಾ ಕಾಲ. ಆದರೆ ವ್ಯವಹಾರದಲ್ಲಿ ಏಳುಬೀಳುಗಳು ಯಾರನ್ನೂ ಯಾವ ಕಾಲದಲ್ಲೂ ಬಿಟ್ಟಿಲ್ಲ ಎಂಬುದು ಇಂತಹ ಕಥೆಗಳಿಂದ ನಾವು ಕಲಿಯಬೇಕಿರುವ ಪಾಠ. ಎಲ್ಲವನ್ನೂ ಕಳೆದುಕೊಂಡರೂ ಮತ್ತೆ ಎದ್ದು ಜಗತ್ತಿನ ಹತ್ತರೊಳಗಿನ ಅತ್ಯುತ್ತಮ ಕಂಪನಿಯಾಗುವುದೆಂದರೆ ಅಷ್ಟು ಸುಲಭವಲ್ಲ! ಈ ತಾಳ್ಮೆ ಮತ್ತು ಆಶಾಭಾವ ನಮ್ಮೆಲ್ಲರನ್ನೂ ಕಾಯಲಿ.

    ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts