

ಬೇಲೂರು: ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಕನ್ನಡ ಸಾಹಿತ್ಯಾಶಕ್ತಿ ಜನರಲ್ಲಿ ಕಡಿಮೆಯಾಗುತ್ತಿದ್ದು, ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಮೌಂಟ್ ಕಾರ್ಮೆಲ್ ಶಾಲೆ ಪ್ರಧಾನ ಸಂಚಾಲಕ ಫಾದರ್ ಜೋಸೆಫ್ ಪಿಂಟೋ ಹೇಳಿದರು.
ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆ ಸಭಾಂಗಣದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕವನ ರಚನಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವಲ್ಲಿ ಪಾಲಕರು ಹಾಗೂ ಶಿಕ್ಷಕರು ವಿಫಲರಾಗುತ್ತಿದ್ದಾರೆ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಮಕ್ಕಳು ಸಾಹಿತ್ಯಾಭಿರುಚಿಯಿಂದ ಹಿಂದೆ ಸರಿಯುತಿದ್ದಾರೆ ಎಂದರು.
ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿ ಕವನ, ಕಾವ್ಯಗಳನ್ನು ರಚಿಸುವಂತೆ ತಿಳಿಸಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ಮುಂದಾಗುವಂತೆ ಪ್ರೋತ್ಸಾಹಿಸಿದರೆ ಅವರು ದೊಡ್ಡ ಸಾಹಿತಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಬೇಲೂರು ತಾಲೂಕು ಸಾಹಿತ್ಯ ಕ್ಷೇತ್ರಕ್ಕೆ ಪೂರಕವಾದ ಭೌಗೋಳಿಕ ಹಾಗೂ ಪ್ರಾಕೃತಿಕ ಹಿನ್ನೆಲೆ ಹೊಂದಿರುವ ಸ್ಥಳವಾಗಿದೆ. ನಮ್ಮಲ್ಲಿರುವ ಜ್ಞಾನ, ಮೌಲ್ಯವನ್ನು ಪ್ರತಿಪಾದಿಸಲು ಸಾಹಿತ್ಯ ಕ್ಷೇತ್ರ ಬೇಕು. ಜತೆಗೆ ಇಂದು ಸರ್ಕಾರ ಬದಲಾದಂತೆ ಪಠ್ಯಗಳು, ವಿಚಾರಗಳು ಸಹ ಬದಲಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮಲ್ಲಿನ ಅಭಿರುಚಿಗಳನ್ನು ಬದಲಾಯಿಸಿಕೊಂಡು ಚಿಕ್ಕಂದಿನಲ್ಲೇ ಸಾಹಿತ್ಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತಮ್ಮಲ್ಲಿರುವ ಸಂಕುಚಿತ ಮನೋಭಾವ, ಕೆಲ ಚಿಂತನೆಗಳನ್ನು ದೂರ ಮಾಡಲು ಸಾಹಿತ್ಯ ಸಹಕಾರಿಯಾಗಿದೆ. ವಿಶೇಷವೆಂದರೆ ತಾವು ಬೇಸರವಾಗಿದ್ದ ಸಂದರ್ಭ ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ಓದಿದರೆ ನಿಮ್ಮೆಲ್ಲ ಚಿಂತೆಗಳು ದೂರಾಗಲಿವೆ. ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯದತ್ತ ಮುಖ ಮಾಡಿದರೆ ಮುಂದೆ ವಿದ್ಯಾಭ್ಯಾಸದೊಂದಿಗೆ ದೊಡ್ಡ ಸಾಹಿತಿಯಾಗಿ ಕೀರ್ತಿವಂತರಾಗಬಹುದು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಲು ಕನ್ನಡ ಸಾಹಿತ್ಯ ಪರಿಷತ್ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಮಾಜಿ ಅಧ್ಯಕ್ಷ ಮಾ.ಶಿವಮೂರ್ತಿ, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಮೌಂಟ್ ಕಾರ್ಮೆಲ್ ಶಾಲೆ ಪ್ರಾಂಶುಪಾಲ ಪ್ರಕಾಶ್ ತಾವೂರ್, ಸಂಪನ್ಮೂಲ ವ್ಯಕ್ತಿಗಳಾದ ಮಾರುತಿ, ಪಲ್ಲವಿ, ಮಧು ಮಾಲತಿ ಇದ್ದರು.