More

    ಹಾಸ್ಟೆಲ್‌ಗಳಿಗೆ ನಂದಿನಿ ಹಾಲು ಪೂರೈಸಿ

    ಆಳಂದ: ಎಲ್ಲ ವಸತಿ ನಿಲಯಗಳಿಗೆ ನಂದಿನಿ ಹಾಲು ಪೂರೈಸುವಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚಿಸಿದರು.

    ಪಟ್ಟಣ ಹೊರವಲಯದ ಕಿತ್ತೂರು ರಾಣಿ ಚನ್ನಮ ವಸತಿನಿಲಯಕ್ಕೆ ಮಂಗಳವಾರ ಭೇಟಿ ಪರಿಶೀಲಿಸಿದ ಅವರು, ಮಹಾರಾಷ್ಟ್ರ ಹಾಲೇಕೆ? ನಮ್ಮಲ್ಲಿ ಹಾಲು ಇಲ್ಲವೆ ಎಂದು ಪ್ರಶ್ನಿಸಿದರು. ಅಲ್ಲದೆ ಮಹಾರಾಷ್ಟ್ರಹಾಲು ಹಾಗೂ ಎಲ್ಲ ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಎಂದು ತಹಸೀಲ್ದಾರ್‌ಗೆ ಹೇಳಿದರು.

    ಅಡುಗೆ ಕೇಂದ್ರದಲ್ಲಿ ಮಕ್ಕಳಿಗಾಗಿ ತರಕಾರಿ ಇಟ್ಟಿರುವುದನ್ನು ಗಮನಿಸಿ ಮನೆಯಲ್ಲಿ ಇದೇ ರೀತಿ ಇಡುತ್ತೀರಾ ಎಂದು ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

    ಮಕ್ಕಳ ಜತೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿ ಜೀವನ ಮತ್ತೆ ಸಿಗಲ್ಲ. ಜೀವನದಲ್ಲಿ ಗುರಿ ತಲುಪಬೇಕಾದರೆ ಶ್ರಮವಹಿಸಿ ಓದಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಐಎಎಸ್, ಐಪಿಎಸ್ ಹುದ್ದೆ ಪಡೆದರೆ ಜಿಲ್ಲೆ, ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದರು. ಅಲ್ಲದೆ ಏನೇ ಸಮಸ್ಯೆ ಇದ್ದರೂ ಹೇಳಿ. ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.

    ಪ್ರಾಂಶುಪಾಲ ಪ್ರಶಾಂತ ಕಡಗಂಚಿ, ಶಿಕ್ಷಕರಾದ ಹಣಮಂತರಾವ, ಶಿವಪುತ್ರ ಕಂಬಾರ, ವಿಜಯಲಕ್ಷ್ಮೀ, ಚಿದಾನಂದ ಆದಿಗೊಂಡೆ, ಪೂಜಾ ಆರ್., ಜಗದೀಶ ಎಸ್., ಸಂಗೀತಾ ಬುಜುರ್ಕೆ ಇತರರಿದ್ದರು.

    ಮಕ್ಕಳೊಂದಿಗೆ ವಾಲಿಬಾಲ್ ಆಡಿದರು: ಡಿಸಿ ಫೌಜಿಯಾ ತರನ್ನುಮ್ ವಿದ್ಯಾರ್ಥಿನಿಯರೊಂದಿಗೆ ಕೆಲಹೊತ್ತು ವಾಲಿಬಾಬ್ ಆಟವಾಡಿ ಗಮನ ಸೆಳೆದರು. ಇದೇ ರೀತಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಿ. ಪ್ರತಿದಿನ ಬೆಳಗ್ಗಿನ ಜಾವ ಯೋಗಾಭ್ಯಾಸ ಮಾಡಿ ಖುಷಿಯಿಂದ ಓದಬೇಕು. ಹೊಸ ವರ್ಷದ ಶುಭ ಹಾರೈಸಿ ಮಕ್ಕಳೊಂದಿಗೆ ಚುರುಮರಿ ಚುಡವಾ ಸವಿಯುತ್ತ ಚರ್ಚೆ ಸಹ ಮಾಡಿದರು.

    ಸದ್ಯಕ್ಕಿಲ್ಲ ರಸ್ತೆ ಅಗಲೀಕರಣ: ಬಹುದಿನಗಳಿಂದ ಕುಂಠಿತಗೊಂಡಿದ್ದ ಪಟ್ಟಣದ ರಸ್ತೆ ಅಗಲೀಕರಣ ಸದ್ಯಕ್ಕಿಲ್ಲ ಎಂದು ಡಿಸಿ ಫೌಜಿಯಾ ತರನ್ನುಮ್ ಹೇಳಿದರು. ಆಳಂದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ವೇ ಕಾರ್ಯ ಮುಗಿದಿದ್ದು, ಶಾಸಕರ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳುವ ಹಂತದಲ್ಲಿದೆ. ಸಹಾಯಕ ಆಯುಕ್ತರ ವರ್ಗಾವಣೆ ಹಿನ್ನೆö್ನಲೆ ಮತ್ತು ಕೆಲವರು ನ್ಯಾಯಾಲಯಕ್ಕೆ ಮೋರೆ ಹೋಗಿದ್ದರಿಂದ ಸದ್ಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೋರ್ಟ್ ತೀರ್ಪಿನ ನಂತರ ಹಳೆಯ ತಹಸಿಲ್ ಕಚೇರಿಯಿಂದ ದರ್ಗಾ ಬೇಸ್‌ವರೆಗೆ ಅಗಲೀಕರಣ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

    ಭೂಸನೂರ ಪಿಎಚ್‌ಸಿಗೆ ಭೇಟಿ: ಭೂಸನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಫೌಜಿಯಾ ತರನ್ನುಮ್, ತಾಯಿ ಕಾರ್ಡ್ ಇತರ ದಾಖಲೆಗಳನ್ನು ಪರಿಶೀಲಿಸಿದರು. ಉಳಿತಾಯ ಪುಸಕ್ತ ಕೊಡಿ ಎಂದು ಕೇಳಿದಾಗ ಸಿಬ್ಬಂದಿ ಇಲ್ಲದ ಕುಂಟು ನೆಪ ಹೇಳಿದರು. ಅದೆಲ್ಲ ಬೇಕಿಲ್ಲ, ನನಗೆ ಪುಸಕ್ತ ಬೇಕು ಎಂದು ತರಾಟೆಗೆ ತೆಗೆದುಕೊಂಡು ಸ್ಥಳದಲ್ಲಿದ್ದ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅವರಿಗೆ ವಾರದಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಉಳಿತಾಯ ಪುಸಕ್ತದ ವರದಿ ಸಲ್ಲಿಸಿ ಎಂದು ಸೂಚಿಸಿದರು.

    ರೈತರ ಎಫ್‌ಐಡಿ ನೋಂದಣಿ ಹೆಚ್ಚಾಗಿ ಆಗುತ್ತಿಲ್ಲ. ಆದರೂ ಅವರ ಜಮೀನಿನ ಪಹಣಿಯೊಂದಿಗೆ ಮಾಹಿತಿ ನೀಡಿ ನೋಂದಣಿ ಮಾಡಿದರೆ ಮಾತ್ರ ಬೆಳೆ ಪರಿಹಾರ, ವಿಮೆ ಹಣ, ಸರ್ಕಾರದ ಸೌಲಭ್ಯ ದೊರೆಯಲಿದೆ. ಹೀಗಾಗಿ ಎಲ್ಲ ರೈತರು ಎಫ್‌ಐಡಿ ನೋಂದಣಿ ಮಾಡಬೇಕು.
    | ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts