More

    ಜಿಲ್ಲಾಧಿಕಾರಿ ಜಗದೀಶ್ ಕೈತೋಟ ಪ್ರೀತಿ

    ಉಡುಪಿ: ಸಾರ್ವಜನಿಕ ಆಡಳಿತದಲ್ಲಿರುವ ಅಧಿಕಾರಿ ಒತ್ತಡದ ಕೆಲಸ ಕಾರ್ಯದ ನಡುವೆಯೂ ಸುಂದರ ಕೈತೋಟ ನಿರ್ಮಿಸಿ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಮಾದರಿಯಾಗಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಜ್ಜರಕಾಡಿನಲ್ಲಿರುವ ತಮ್ಮ ಸರ್ಕಾರಿ ಬಂಗ್ಲೆ ಮನೆಯ ಆವರಣದಲ್ಲಿ ಸಾವಯವ ತರಕಾರಿ ಒಳಗೊಂಡ ಕೈತೋಟ ನಿರ್ಮಿಸಿ ಸ್ವತಃ ಮನೆ ಅಡುಗೆಗೂ ಬಳಕೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಪತ್ನಿ ಸೌಮ್ಯ ಜಗದೀಶ್ ಕೂಡ ಸಾಥ್ ನೀಡುತ್ತಿದ್ದು ಕೈತೋಟದ ಆರೈಕೆ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಯವರ ಕೈತೋಟದಲ್ಲಿ ಮೂಲಂಗಿ, ಟೊಮ್ಯಾಟೊ, ಬೆಂಡೆ, ಅಲಸಂಡೆ, ಬದನೆ, ಹೀರೆಕಾಯಿ, ಮಟ್ಟುಗುಳ್ಳ, ಪುದೀನಾ, ಕೊತ್ತಂಬರಿ ಸಹಿತ ವಿವಿಧ ತರಕಾರಿ ಗಿಡಗಳನ್ನು ಬೆಳೆದಿದ್ದಾರೆ. ಕೃಷಿ ಕುಟುಂಬ ಹಿನ್ನೆಲೆಯುಳ್ಳ ಜಗದೀಶ್ ಸರ್ಕಾರಿ ಸೇವೆಗೆ ಸೇರುವ ಮುನ್ನ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಮೈಸೂರಿನಲ್ಲಿ ಮಹಾನಗರ ಪಾಲಿಕೆ ಆಯುಕ್ತ, ಹಾವೇರಿಯಲ್ಲಿ ಅಪರ ಜಿಲ್ಲಾಧಿಕಾರಿ, ಸವಣೂರು, ಶಿರ್ಸಿಯಲ್ಲಿ ಸಹಾಯಕ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭವೂ ತಮ್ಮ ಸರ್ಕಾರಿ ನಿವಾಸದ ಆವರಣದಲ್ಲಿ ಕೈತೋಟ ನಿರ್ಮಿಸಿದ್ದರು. ಕೃಷಿ ಕುಟುಂಬ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮಳಲಗದ್ದೆ ನಿವಾಸಿ ಜಿ.ಜಗದೀಶ್ ತಂದೆ ಕೃಷಿಕರು. ಸಣ್ಣ ಜಮೀನು ಹೊಂದಿರುವ ಅವರು ತೆಂಗು, ಭತ್ತ ಕೃಷಿ ಮಾಡುತ್ತಾರೆ. ಡಿಸಿ ತನ್ನ ಮನೆಗೆ ಬೇಕಾದ ತೆಂಗು ಹಾಗೂ ಅಕ್ಕಿಯನ್ನು ಮನೆಯಿಂದಲೇ ತರಿಸಿಕೊಳ್ಳುತ್ತಾರೆ. ತಂದೆ ಕೃಷಿ ಭೂಮಿಯಲ್ಲೂ ರಸಗೊಬ್ಬರದ ಬಳಕೆ ಕಡಿಮೆ ಎನ್ನುವುದೇ ಮತ್ತೊಂದು ವಿಶೇಷ.

    ಸಾವಯವ ತರಕಾರಿ: ತೋಟಗಾರಿಕಾ ಇಲಾಖೆಯಿಂದ ಬೀಜ ಖರೀದಿಸಿ ಕೈ ತೋಟ ಮಾಡಿದ್ದಾರೆ ಜಗದೀಶ್. ಮನೆಯಂಗಳದಲ್ಲಿ ಸುಂದರ ಹೂವಿನ ತೋಟವನ್ನೂ ನಿರ್ಮಿಸಿದ್ದು, ಇದರ ನಡುವೆ ಕೈ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ರಸಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡುತ್ತಿಲ್ಲ. ಮನೆಯಲ್ಲಿರುವ ಏರೋಬಿಕ್ ಕಾಂಪೋಸ್ಟ್ ಗೊಬ್ಬರವನ್ನೇ ಬಳಕೆ ಮಾಡಲಾಗುತ್ತಿದೆ. ಬೆಂಡೆ, ಅಲಸಂಡೆ, ಬದನೆ ಕಾಯಿ ಬಿಟ್ಟಿದ್ದು, ಮೂಲಂಗಿ, ಟೊಮ್ಯಾಟೊ, ಹೀರೆಕಾಯಿ ಫಲ ಬಿಡಬೇಕಿದೆ.

    ಮನೆಯಲ್ಲೆ ಏರೋಬಿಕ್ ಕಾಂಪೋಸ್ಟ್: ತ್ಯಾಜ್ಯ ಸಮಸ್ಯೆಗೆ ಪರಿಹಾರವಾಗಿ ಏರೋಬಿಕ್ ಕಾಂಪೋಸ್ಟ್ ವಿಧಾನವನ್ನು ಜಿಲ್ಲಾಧಿಕಾರಿ ಜಿ.ಜಗದೀಶ ದಂಪತಿ ತಮ್ಮ ನಿವಾಸದಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಉತ್ಪತ್ತಿಯಾದ ಸಾವಯವ ಗೊಬ್ಬರವನ್ನು ಕೈತೋಟ, ಹೂವಿನ ಗಿಡಗಳಿಗೆ ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರ, ನೀರಾವರಿ ಸೇರಿದಂತೆ ವ್ಯವಸ್ಥಿತ ನಿರ್ವಹಣೆಯಿಂದ ಡಿಸಿ ಅವರ ಕೈತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

    ಸದಾ ಕೆಲಸದ ಒತ್ತಡದಲ್ಲಿರುವ ನನಗೆ ಒತ್ತಡ ನಿವಾರಣೆಗೆ ಕೈತೋಟ ನೆಮ್ಮದಿ ನೀಡುತ್ತದೆ. ಪ್ರತಿದಿನ ಬೆಳಗ್ಗೆ, ಸಾಯಂಕಾಲ ತೋಟ ಸುತ್ತಿ ನಿರ್ವಹಣೆ ಮಾಡುತ್ತೇನೆ. ಮನೆಯ ಕೆಲಸದ ಒಬ್ಬರು ಗಿಡಗಳಿಗೆ ನೀರು ಹಾಕುತ್ತಾರೆ. ನಮ್ಮ ಕೈತೋಟ ಮತ್ತು ಹೂವಿನ ತೋಟಕ್ಕೆ ರಾಸಾಯನಿಕ, ಕೀಟನಾಶಕ ಬಳಕೆ ಮಾಡುವುದಿಲ್ಲ.
    ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ

     

    ಅವಿನ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts