More

    ಡಿಸಿ ನಿರ್ಬಂಧ, ಸಚಿವರಿಂದ ತೆರವು!, ಇಬ್ಬರ ಪ್ರತ್ಯೇಕ ಆದೇಶ-ಹೇಳಿಕೆಗಳಿಂದ ದ.ಕ.ದಲ್ಲಿ ಗೊಂದಲ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ ಸರ್ಕಾರದ ಆದೇಶದನ್ವಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

    ನಿಷೇಧಿತ ಅವಧಿಯಲ್ಲಿ ಜಿಲ್ಲೆಯ ಎಲ್ಲ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗಳನ್ನು ನಿಷೇಧಿಸಲಾಗಿದೆ. ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ಆಚರಿಸಬೇಕು. ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಷಬ್-ಎ-ಬರಾತ್, ಗುಡ್ ಫ್ರೈಡೇ ಇತ್ಯಾದಿ ಸಂದರ್ಭ ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಪ್ರದೇಶಗಳಲ್ಲಿ ಸಭೆ, ಜಾತ್ರೆ, ಮೇಳಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಆದೇಶವನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ಸಚಿವ ಕೋಟ ಸ್ಪಷ್ಟನೆ: ಜಿಲ್ಲಾಧಿಕಾರಿ ಆದೇಶದಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಂಜೆಯೇ ಸ್ಪಷ್ಟನೆ ನೀಡಿದ್ದಾರೆ, ಅಲ್ಲದೆ ಜಿಲ್ಲಾಧಿಕಾರಿಯವರಲ್ಲೂ ಮರು ಸ್ಪಷ್ಟನೆ ನೀಡಲು ಸೂಚಿಸಿದ್ದಾರೆ.

    ಈಗಾಗಲೇ ಹಮ್ಮಿಕೊಂಡ ಯಕ್ಷಗಾನ, ಕೋಲ, ನೇಮ, ಪೂಜೆ ಪುನಸ್ಕಾರ, ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್-19 ನಿಯಮಪಾಲನೆಯೊಂದಿಗೆ ನಡೆಸಬಹುದಾಗಿದೆ. ಬಯಲು/ಮೈದಾನ ಪ್ರದೇಶದಲ್ಲಿ ಗರಿಷ್ಠ 500 ಜನಕ್ಕಿಂತ ಜಾಸ್ತಿ ಸೇರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಉಡುಪಿ ಜಾತ್ರೆಗಳಿಗೆ ಸಾರ್ವಜನಿಕರಿಲ್ಲ
    ನಿಯಮ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಜಗದೀಶ್ ಸೂಚನೆ
    ಉಡುಪಿ: ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಜಾತ್ರೆ, ಉತ್ಸವ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರು ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.

    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚಳವಾಗುತ್ತಿದ್ದು, ಯಾವುದೇ ಕಾರಣಕ್ಕೂ ಜಾತ್ರೆ, ಉತ್ಸವದ ಹೆಸರಲ್ಲಿ ಜನರು ಸೇರುವಂತಿಲ್ಲ. ಮದುವೆ ಸಮಾರಂಭದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದರೆ ಸಭಾಂಗಣದ ಮಾಲೀಕರ ವಿರುದ್ಧ ಕೇಸು ದಾಖಲಿಸಿ, ದಂಡ ವಿಧಿಸಲಾಗುವುದು. ಯಕ್ಷಗಾನ, ನಾಟಕ, ಚಲನಚಿತ್ರ ಮಂದಿರಗಳಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯ ಪ್ರದರ್ಶನ ನಡೆಸಲು ನಿರ್ಬಂಧವಿಲ್ಲ, ಆದರೆ ಅಂತರ, ಮಾಸ್ಕ್ ಕಡ್ಡಾಯ ಎಂದರು.

    ಶಿಕ್ಷಣ ಸಂಸ್ಥೆಗಳಿಂದ ನಿರ್ಲಕ್ಷೃ ಸಲ್ಲ: ಜಿಲ್ಲೆಯಲ್ಲಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಶಿಕ್ಷಣ ಸಂಸ್ಥೆಗಳಿಂದ ವರದಿಯಾಗುತ್ತಿದೆ. ಎಂಐಟಿ, ಕುಂಜಾರುಗಿರಿ, ಕಾರ್ಕಳ ಹಾಗೂ ಶಂಕರನಾರಾಯಣ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದಿರುವುದು ಕಂಡು ಬರುತ್ತಿದೆ. ಡಿಡಿಪಿಐ ಹಾಗೂ ಇತರೆ ಶಿಕ್ಷಣಾಧಿಕಾರಿಗಳ ಜತೆಗೆ ಸಭೆ ನಡೆಸಿ, ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ನಿಯಮಾವಳಿ ವ್ಯವಸ್ಥಿತವಾಗಿ ಪಾಲಿಸುವಂತೆ ಆದೇಶಿಸಲಾಗಿದೆ. ಜತೆಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಮಣಿಪಾಲ ಸಾರ್ವಜನಿಕರು ಎಚ್ಚರ: ಮಣಿಪಾಲದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದು, ಇಲ್ಲಿ ವ್ಯಾಪಾರ ವಹಿವಾಟು ನಡೆಸುವ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಹೊರ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕ ಗಡಿ ಜಿಲ್ಲೆಗಳ ಚೆಕ್‌ಪೋಸ್ಟ್‌ನಲ್ಲಿ ಸಾರ್ವಜನಿಕರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದರೆ ಮಾತ್ರ ರಾಜ್ಯದೊಳಗೆ ಪ್ರವೇಶ ನೀಡಲಾಗುತ್ತಿದೆ ಎಂದರು.

    ದ.ಕ. 47, ಉಡುಪಿ 53 ಪಾಸಿಟಿವ್: ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 47 ಮಂದಿಗೆ ಕೋವಿಡ್ ದೃಢಪಟ್ಟಿದೆ. 44 ಮಂದಿ ಗುಣವಾಗಿದ್ದಾರೆ. ಸದ್ಯ 582 ಸಕ್ರಿಯ ಪ್ರಕರಣಗಳಿವೆ. ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 53 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇದರಲ್ಲಿ 11 ಮಂದಿ ಮಣಿಪಾಲ ಎಂಐಟಿ ಕ್ಯಾಂಪಸ್‌ನ ವಿದ್ಯಾರ್ಥಿಗಳು. ಒಟ್ಟು ಸೋಂಕಿತರ ಸಂಖ್ಯೆ 25,185ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 753 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts